ಪ್ರತಾಪ್ ಸಿಂಹ ಹಾಗೂ ಅನಂತಕುಮಾರ್ ಹೆಗಡೆ ಅವರ ವಜಾಕ್ಕೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ: ಕೆ.ಎಸ್.ಶಿವರಾಮು
ಮೈಸೂರು,ಡಿ.6: ಸಂಸದ ಪ್ರತಾಪ್ ಸಿಂಹ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಯವರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆ, ಇವರುಗಳ ನಡೆ, ಬಳಸಿರುವ ಅಸಂವಿಧಾನಿಕ ಪದಗಳು ಕೋಮು ಸಂಘರ್ಷಕ್ಕೆಡೆ ಮಾಡಿದ್ದು, ಇವರನ್ನು ತಕ್ಷಣವೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಒಬ್ಬ ದಂಡಪಿಂಡ, ಜಾತಿ ಧರ್ಮದ ಹೆಸರನಲ್ಲಿ ರಾಜಕೀಯ ನಡೆಸುತ್ತಿದ್ದು ಗೂಂಡಾವರ್ತನೆ ಮೂಲಕ ಸಂಸದ ಸ್ಥಾನಕ್ಕೆ ಅಪಮಾನವೆಸಗಿದ್ದು ಆ ಸ್ಥಾನದಲ್ಲಿರಲು ನಾಲಾಯಕ್, ಅಲ್ಲದೇ ಜಾತ್ಯಾತೀತ ವಾದದ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರಶ್ನೆಗಳನ್ನೆತ್ತಿರುವುದು ಗಮನಿಸಿದರೆ, ಅವರು ಕೇಂದ್ರ ಸಚಿವರಾಗಲು ನಿಷ್ಪ್ರಯೋಜಕ, ಜಾತ್ಯಾತೀತತೆ ಸರ್ವ ಧರ್ಮ ಸಮನ್ವಯದ ಸಂಕೇತವಾಗಿದೆ, ಅದಕ್ಕೆ ಅಪ್ಪ ಇಲ್ಲ ಎನ್ನುವ ಸಚಿವರ ಮಾತು ಪರಿಜ್ಞಾನ ಕೊರತೆ ಸೂಚಿಸುವ ಜೊತೆಗೆ ಸಂವಿಧಾನಕ್ಕೆಸಗಿದ ಅಪಮಾನ ಎಂದು ಟೀಕಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯವನ್ನು ಗುಜರಾತ್ ಮಾಡಲು ಹೊರಟ್ಟಿದ್ದು ಇಡೀ ರಾಜ್ಯಕ್ಕೆ ಕೋಮುವಾದದ ಬೆಂಕಿ ಹಚ್ಚುತ್ತಿದ್ದಾರೆ. ಈ ಬಗ್ಗೆ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಲೈವ್ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅವರ ಆಡಿರುವ ಮಾತುಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಒಬ್ಬ ದಡ್ಡ ಶಿಖಾಮಣಿ, ಬಿಜೆಪಿಯವರು ಕೋಮುವಾದವೆಂಬ ಅಫೀಮ್ ಅನ್ನು ಶೂಧ್ರರಾದ ಇಂತಹವರ ತಲೆಗೆ ತುಂಬಿ ಸಮಾಜದಲ್ಲಿ ಅಸಾಮರಸ್ಯ ಸೃಷ್ಠಿಸಿ ತಮ್ಮ ಪಾಡಿಗೆ ತಾವು ಭದ್ರವಾಗಿರುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಈ ಮೊದಲು ನಗರಗಳಲ್ಲಿ ಇದ್ದ ಜಾತಿ ಕೇರಿಗಳ ಜಾಗದಲ್ಲಿ, ಇಂದು ಧರ್ಮದ ಕೇರಿಗಳನ್ನು ಹುಟ್ಟು ಹಾಕುವ ಹುನ್ನಾರ ಇವರದಾಗಿದೆ ಎಂದು ಸಂಶಯ ವ್ಯಕ್ತಪಡಿಸಿ, ಹಿಂದೂ ಧರ್ಮವನ್ನು ನಾಶ ಮಾಡಿ ಬ್ರಾಹ್ಮಣತ್ವವನ್ನು ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದ್ದೆ ಎಂದು ಹೇಳಿದರು.
ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಗೋಡ್ಸೆ ಸಂತತಿ, ಇಂತಹವರಿಂದ ಸಾಂಸ್ಕೃತಿಕ, ಶಾಂತಿ ಸೌಹಾರ್ಧಯುತ ನಗರಿಯೆಂದೆ ಖ್ಯಾತವಾಗಿರುವ ಮೈಸೂರು ಜಿಲ್ಲೆಯಲ್ಲಿ ಬಿಗುವಿನ ವಾತಾವರಣವುಂಟಾಗಿದೆ, ಆದ್ದರಿಂದ ಇವರುಗಳನ್ನು ತಕ್ಷಣವೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಇಂದು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಿಪಿಎಂ ಕಾರ್ಯದರ್ಶಿ ಕೆ.ಬಸವರಾಜು, ಕ.ರಾ.ಹಿ.ಜಾ.ವೇ. ಪತ್ರಿಕಾ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ ಮರಂಕಯ್ಯ,ರಾಜ್ಯ ದ.ಸಂ.ಸ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮೊದಲಾದವರು ಉಪಸ್ಥಿತರಿದ್ದರು.







