‘ಭಾರತಕ್ಕೆ ನೂರು ಬೋಲ್ಟ್ ರನ್ನು ಸೃಷ್ಟಿಸುವ ಸಾಮರ್ಥ್ಯವಿದೆ’
ರಾಜ್ಯವರ್ಧನ್ ರಾಥೋಡ್ ವಿಶ್ವಾಸ

ಹೊಸದಿಲ್ಲಿ, ಡಿ.6:‘‘ಎಲ್ಲರೂ ಒಗ್ಗಟ್ಟಾಗಿ ದೇಶದ ಕ್ರೀಡಾ ಸಂಸ್ಕೃತಿಯನ್ನು ಬದಲಿಸಿದರೆ ಭಾರತ ಉಸೇನ್ ಬೋಲ್ಟ್‌ರಂತಹ ನೂರು ಅಥ್ಲೀಟ್‌ಗಳನ್ನು ಸೃಷ್ಟಿಸಬಹುದು. ಅಂತಹ ಸಾಮರ್ಥ್ಯ ನಮಗಿದೆ’’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘‘ಶಾಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಉತ್ತಮಪಡಿಸಲು ಸರಕಾರ ಯತ್ನಿಸುತ್ತಿದ್ದು, ಮುಂದಿನ ವರ್ಷದ ಮೇ-ಜೂನ್‌ನಲ್ಲಿ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಿಗದಿಯಾಗಿದೆ. ಭಾರತದಲ್ಲಿ ಕೌಶಲ್ಯಾಧರಿತ ಆಯ್ಕೆ ನಡೆಯುತ್ತದೆ. ಹಾಗಾಗಿ ಇತರ ದೇಶ ನಮ್ಮನ್ನು ಹಿಂದಿಕ್ಕುತ್ತಿವೆ’’ ಎಂದು ರಾಥೋಡ್ ತಿಳಿಸಿದ್ದಾರೆ.
‘‘12ನೇ ವಯಸ್ಸಿನಲ್ಲಿ ಐದಡಿ ಆರು ಇಂಚು ಎತ್ತರವಿರುವ ಬಾಲಕ-ಬಾಲಕಿಯರನ್ನು ವಾಲಿಬಾಲ್ ಅಥವಾ ಬಾಸ್ಕೆಟ್‌ಬಾಲ್‌ಗೆ ಆಯ್ಕೆ ಮಾಡಬೇಕು. ಕೈ ಹಾಗೂ ಕಣ್ಣಿನ ಸಮಸ್ಯೆ ಇದ್ದು ತುಂಬಾ ಚುರುಕಾಗಿದ್ದವರನ್ನು 100 ಮೀ. ಓಟಕ್ಕೆ ಆಯ್ಕೆ ಮಾಡಬೇಕು. 1.25 ಬಿಲಿಯನ್ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಉಸೇನ್ ಬೋಲ್ಟ್‌ರಂತಹ 100 ಅಥ್ಲೀಟ್‌ಗಳನ್ನು ಸಜ್ಜುಗೊಳಿಸಬಹುದು ಎನ್ನುವುದು ನನ್ನ ಬಲವಾದ ನಂಬಿಕೆ’’ ಎಂದು ರಾಥೋಡ್ ಹೇಳಿದ್ದಾರೆ.







