ಅಂಬೇಡ್ಕರ್ ಜಗತ್ತು ಕಂಡ ಅಪರೂಪದ ಮಾನವತವಾದಿ : ರಾಮಲಿಂಗಂ

ಹನೂರು,ಡಿ.7: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ ಈ ದೇಶದ ಶಕ್ತಿ. ಜಗತ್ತು ಕಂಡ ಅಪರೂಪದ ಮಾನವತವಾದಿ ಎಂದು ರಾಮಾಪುರ ಬ್ಲಾಕ್ ಕಾಂಗ್ರೆಸ್ ಎಸ್.ಸಿ. ವಿಭಾಗದ ಅಧ್ಯಕ್ಷರಾದ ರಾಮಲಿಂಗಂರವರು ಬಣ್ಣಿಸಿದರು.
ರಾಮಾಪುರ ಗೋಪಿ ಶೆಟ್ಟಿಯೂರು ಅಂಬೇಡ್ಕರ್ ನಗರದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬಾ ಸಾಹೇಬ್ ಪರಿನಿರ್ವಾಣ ದಿನದ ಅಂಗವಾಗಿ ಮೌನಾಚರಣೆ ಹಾಗೂ ಜೈಭೀಮ್ ಯುವಜನ ಕಲಾ ಸಂಘದ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಅಂಬೇಡ್ಕರ್‍ರವರ ಜನ್ಮ ದಿನಾಚರಣೆಯನ್ನು ವಿಶ್ವ ಜ್ಞಾನದ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರೆ ಅವರ ಬಗ್ಗೆ ಜಗತ್ತು ಎಂತಹ ಗೌರವ ನೀಡುತ್ತಿದೆ ಎಂಬುದು ತಿಳಿಯುತ್ತದೆ. ಅಂಬೇಡ್ಕರ್‍ರವರು ಭಾರತ ದೇಶದಲ್ಲಿ ಇರುವ ಜಾತಿ ತಾರತಮ್ಯದ ವಿರುದ್ದ ಅವಿರತ ಹೋರಾಟವನ್ನು ಮಾಡಿದರು.
ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಇಡಿ ವಿಶ್ವವೇ ಗೌರವಸುತ್ತಿದೆ. ಅವರು ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿ ಸಂವಿಧಾನ ರಚನೆ ಮಾಡಿಲ್ಲ ಎಲ್ಲಾ ಜಾತಿ ಧರ್ಮದವರಿಗೆ ಅನುಕೂಲವಾಗುವ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಆದರೆ ನಮ್ಮ ದೇಶದ ಕೆಲವು ಜಾತಿವಾದಿಗಳು ಅವರು ಬರೆದಿರುವ ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ರೀತಿ ಮಾತನಾಡುತ್ತಾರೆ. ಇಂತಹವರ ವಿರುದ್ದ ಶೋಷಿತ ಸಮುದಾಯ ಜಾಗೃತರಾಗಬೇಕು ಮತ್ತು ಪ್ರತಿಭಟಿಸಬೇಕು.ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಅಂಬೇಡ್ಕರ್‍ವರು ಶಿಕ್ಷಣದ ಮೂಲಕವೇ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದರು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೈಭೀಮ್ ಯುವಜನ ಕಲಾ ಸಂಘದ ಅಧ್ಯಕ್ಷ ಆರ್.ಕೆ.ಸುಂದರೇಶ್, ಪಳನಿಮೇಡು ಅಂಬೇಡ್ಕರ್ ಸಂಘದ ಅಧ್ಯಕ್ಷ ವಿ.ಟಿ.ಕಾರ್ತಿಕ್ ಕುಮಾರ್, ರಾಮಾಪುರ ಗ್ರಾ.ಪಂ.ಕಾರ್ಯದರ್ಶಿ ನಾಗರಾಜು, ಮಲ್ಲೇಶ್, ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.







