ಚಲಾವಣೆಗೆ ಬಂದ 2 ತಿಂಗಳಲ್ಲೇ 2 ಸಾವಿರದ ಖೋಟಾನೋಟು: ಎನ್‌ಸಿಆರ್‌ಬಿ ವರದಿ

ಹೊಸದಿಲ್ಲಿ, ಡಿ.7: 2016ರ ನವೆಂಬರ್‌ನಲ್ಲಿ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದು ಮಾಡಿದ ನಿರ್ಧಾರ ಪ್ರಕಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಖೋಟಾ ನೋಟುಗಳನ್ನು ಪತ್ತೆಹಚ್ಚಿ, ನಿರ್ಮೂಲ ಮಾಡುವ ಪ್ರಮುಖ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಿದ್ದರು.
ಆದರೆ ಸರಕಾರ ಚಾಪೆಯಡಿ ನುಸುಳಿದ್ದರೆ ತಾವು ರಂಗೋಲಿಯಡಿ ನುಸುಳುವಷ್ಟು ಚಾಣಾಕ್ಷರು ಎಂಬುದನ್ನು ಸಾಬೀತುಪಡಿಸಿರುವ ಖೋಟಾನೋಟು ದಂಧೆಕೋರರು ಹೊಸ 2000 ರೂ. ಮುಖಬೆಲೆಯ ಕರೆನ್ಸಿ ನೋಟು ಚಲಾವಣೆಗೆ ಬಂದ 53 ದಿನಗಳೊಳಗೇ ಖೋಟಾನೋಟು ಚಲಾವಣೆಗೆ ತಂದಿದ್ದಾರೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಇತ್ತೀಚಿಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. 2016ರ ನವೆಂಬರ್ 8ರಿಂದ 2017ರ ನವೆಂಬರ್ 30ರ ವರೆಗಿನ ಅವಧಿಯಲ್ಲಿ 2000 ರೂ. ಮುಖಬೆಲೆಯ ಒಟ್ಟು 2,272 ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಗುಜರಾತ್‌ನಲ್ಲಿ ಗರಿಷ್ಠ ಸಂಖ್ಯೆಯ (1,300) ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದರೆ ಪಂಜಾಬ್(548), ಕರ್ನಾಟಕ(254), ತೆಲಂಗಾಣ(114), ಮಹಾರಾಷ್ಟ್ರ(27), ಮಧ್ಯಪ್ರದೇಶ(8), ರಾಜಸ್ತಾನ(6), ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಹರ್ಯಾಣ ತಲಾ 3, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳದಲ್ಲಿ ತಲಾ 2, ಮಣಿಪುರ ಮತ್ತು ಒಡಿಶಾದಲ್ಲಿ ತಲಾ 1 ಖೋಟಾ ನೋಟು ಪತ್ತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಿಡುಗಡೆಗೊಳಿಸಿರುವ ಎನ್‌ಸಿಆರ್‌ಬಿ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಗೋವಾದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗಿದ್ದರೆ ಛತ್ತೀಸ್‌ಗಡ, ಸಿಕ್ಕಿಂ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಲಕ್ಷದ್ವೀಪಗಳಲ್ಲಿ ಯಾವುದೇ ನಕಲಿ ನೋಟುಗಳು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
2,000 ರೂ.ನೋಟುಗಳೂ ಸೇರಿದಂತೆ ಒಟ್ಟು 2,81,839 ಖೋಟಾನೋಟುಗಳನ್ನು ದೇಶದ ವಿವಿಧೆಡೆ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕಳೆದ ವರ್ಷ 1,000 ರೂ.ಮುಖಬೆಲೆಯ 82,494 ಕರೆನ್ಸಿ ನೋಟುಗಳು, 500 ರೂ.ಮುಖಬೆಲೆಯ 1,32,227 ಕರೆನ್ಸಿ ನೋಟುಗಳು, 100 ರೂ.ಮುಖಬೆಲೆಯ 59,713 ಕರೆನ್ಸಿ ನೋಟುಗಳು, 50 ರೂ.ಮುಖಬೆಲೆಯ 2,137 ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ .
ಅಲ್ಲದೆ ಕಳೆದ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಪೊಲೀಸರು, ಆದಾಯತೆರಿಗೆ ಇಲಾಖೆ ಮತ್ತು ಇತರ ಸರಕಾರಿ ಏಜೆನ್ಸಿಗಳು ದೇಶದಾದ್ಯಂತ ನಡೆಸಿದ ದಾಳಿ ಮತ್ತು ಶೋಧ ಕಾರ್ಯಾಚರಣೆಯಲ್ಲಿ 20 ರೂ. ಮುಖಬೆಲೆಯ 184 , 10 ರೂ.ಮುಖಬೆಲೆಯ 615 ನೋಟುಗಳು ಮತ್ತು ನಾಣ್ಯಗಳು, ಹಾಗೂ 1 ರೂ.ಮುಖಬೆಲೆಯ 196 ಖೋಟಾ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. 2016ರಲ್ಲಿ 10,12, 22,821 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಶಪಡಿಸಿಕೊಳ್ಳಲಾದ ಖೋಟಾ ನೋಟುಗಳ ವೌಲ್ಯಗಳ ಲೆಕ್ಕಾಚಾರದಂತೆ ದಿಲ್ಲಿ (5,65,21,460 ರೂ.) ಅಗ್ರಸ್ಥಾನದಲ್ಲಿದ್ದರೆ, ಗುಜರಾತ್(2,37,24,050 ರೂ.), ಪಶ್ಚಿಮ ಬಂಗಾಲ (2,32,95,800 ರೂ.), ಆಂಧ್ರಪ್ರದೇಶ (92,80,000 ರೂ.), ಕರ್ನಾಟಕ(80,09,136 ರೂ.), ತೆಲಂಗಾಣ(76,00,905 ರೂ.), ಉತ್ತರಪ್ರದೇಶ(50,13,700 ರೂ.), ಮಹಾರಾಷ್ಟ್ರ(47,99,700 ರೂ.), ಪಂಜಾಬ್(42,39,750 ರೂ.), ಬಿಹಾರ(37,36,800 ರೂ.), ತಮಿಳುನಾಡು(33,42,540 ರೂ.), ಕೇರಳ (20,57,200 ರೂ.), ಮಧ್ಯಪ್ರದೇಶ(16,26,890 ರೂ.), ಚಂಡೀಗಡ(14,99,000 ರೂ.), ರಾಜಸ್ತಾನ(10,35,100 ರೂ.), ಅಸ್ಸಾಂ(8,00,050 ರೂ.), ಜಾರ್ಖಂಡ್(7,06,000 ರೂ.) ಮತ್ತು ಉತ್ತರಾಖಂಡ(6,66,400 ರೂ.) ಆ ಬಳಿಕದ ಸ್ಥಾನದಲ್ಲಿವೆ.







