"ಸಾಮರಸ್ಯ ನಡಿಗೆ"ಯಲ್ಲಿ ಜಲೀಲ್ ಕರೋಪಾಡಿ ಹತ್ಯೆ ಆರೋಪಿ ಹೆಸರನ್ನು ಸಚಿವರು ಬಹಿರಂಗೊಳಿಸಲಿ: ಶಾಹುಲ್ ಎಸ್.ಎಚ್
ಬಾಬರಿ ಮಸೀದಿ ಧ್ವಂಸ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
.jpg)
ಬಂಟ್ವಾಳ, ಡಿ. 7: "ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷಗಳು" ಎಂಬ ಶೀರ್ಷಿಕೆಯಡಿ ಬಾಬರಿ ಮಸೀದಿ ಧ್ವಂಸ ಖಂಡಿಸಿ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವತಿಯಿಂದ ಬಿ.ಸಿ.ರೋಡಿನ ಕೈಕಂಬದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಎಸ್‌ಡಿಪಿಐ ಅಧ್ಯಕ್ಷ ಶಾಹುಲ್ ಎಸ್.ಎಚ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಭಾರತದ ಜಾತ್ಯತೀತಕ್ಕೆ ಸವಾಲಾದ ಬಾಬರಿ ಮಸೀದಿಯನ್ನು ಅದೇ ಜಾಗದಲ್ಲಿ ಪುನರ್‌ನಿರ್ಮಾಣ ಮಾಡಬೇಕು. ಮಸೀದಿ ಧ್ವಂಸಕ್ಕೆ ಕಾರಣರಾದ ಲಿಬರ್‌ಹಾನ್ ಆಯೋಗವು ಸೂಚಿಸಿದ ಎಲ್.ಕೆ.ಅಡ್ವಾಣಿ ಸಹಿತ 68 ಮಂದಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿ.12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ಕಾಂಗ್ರೆಸ್ ಪ್ರಾಯೋಜಕತ್ವದ ಸಾಮರಸ್ಯ ನಡಿಗೆಗೆ ಕೋಮುವಾದಿ ಹಾಗೂ ಕೊಲೆಗೆಡುಕರನ್ನು ಸೇರಿಸುವುದಿಲ್ಲ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿಯ ಹತ್ಯೆಯನ್ನು ಯಾರು ಮಾಡಿದ್ದು? ಎಂದು ಸಚಿವರು ಬಹಿರಂಗಪಡಿಸಲಿ ಎಂದು ಸವಾಲುಹಾಕಿದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಬಾಬರಿ ಮಸೀದಿ ಧ್ವಂಸವಾಗಿ ರಾಷ್ಟ್ರೀಯ ಅವಮಾನವಾಗಿ 25 ವರ್ಷವಾದರೂ ಈ ಅವಮಾನಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದು ಕೇವಲ ಮಸೀದಿಯ ಧ್ವಂಸ ಅಲ್ಲ, ದೇಶದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಡಿ.6ರಂದು ಬಾಬರಿ ಧ್ವಂಸದ ವಿರುದ್ಧ ಎಸ್‌ಡಿಪಿಐ ಪ್ರಯುಕ್ತ ರಾಜ್ಯಾದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನ ಮೇರೆಗೆ ದ.ಕ. ಜಿಲ್ಲೆಯಾದ್ಯಂತ ನಿರ್ಬಂಧಕಾಜ್ಞೆ ಜಾರಿಗೊಳಿಸುವ ಮೂಲಕ ಪ್ರಜಾತಂತ್ರವಾದ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂದು ಹೇಳಿದರು.
ಎಸ್‌ಡಿಪಿಐ ಬಂಟ್ವಾಳ ಘಟಕದ ಕಾರ್ಯದರ್ಶಿ ಇಜಾಝ್ ಮಾತನಾಡಿ, ಮಹಾತ್ಮಗಾಂಧಿಯನ್ನು ಕೊಂದವರೇ ಬಾಬರಿ ಮಸೀದಿಯ ಕೆಡುಕರು. ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಕಾಂಗ್ರೆಸ್-ಬಿಜೆಪಿ ಸಮಾನವಾಗಿ ಭಾಗಿಯಾಗಿದೆ ಎಂದ ಅವರು, ಮಸೀದಿಯನ್ನು ಧ್ವಂಸ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತೆ ಅದೇ ಸ್ಥಳದಲ್ಲಿ ಮಸೀದಿ ನಿರ್ಮಾಣವಾಗುವ ಮೂಲಕ ದೇಶದಲ್ಲಿ ಬಿಜೆಪಿ ನಿರ್ಮೂಲನವಾಗಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್‌ಡಿಟಿಯು ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ, ಎಸ್‌ಡಿಪಿಐ ತಾಲೂಕು ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಪುರಸಭೆ ಸದಸ್ಯ ಮುನೀಶ್ ಅಲಿ, ಮುಖಂಡರಾದ ಸುಲೈಮಾನ್, ಯಾಕೂಬ್ ಮದ್ದ ಮತ್ತಿತರರು ಉಪಸ್ಥಿತರಿದ್ದರು. ರಹಿಮಾನ್ ಮಠ ಸ್ವಾಗತಿಸಿ, ವಂದಿಸಿದರು.







