ಪಲಿಮಾರು ಶ್ರೀಗಳ ದ್ವಿತೀಯ ಪರ್ಯಾಯಕ್ಕೆ ಭತ್ತ ಮುಹೂರ್ತ

ಉಡುಪಿ, ಡಿ.7: 2018ರ ಜನವರಿ 18ರ ಮುಂಜಾನೆ ನಡೆಯುವ ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಮಹೋತ್ಸವದಲ್ಲಿ ಎರಡನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ನಾಲ್ಕನೇ ಹಾಗೂ ಕೊನೆಯದಾದ ಭತ್ತ ಮುಹೂರ್ತ ಇಂದು ಬೆಳಗ್ಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಶ್ರೀಕೃಷ್ಣ ಮಠದ ಬಡಗು ಮಾಳಿಗೆಯಲ್ಲಿ ನಡೆಯಿತು.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಭತ್ತ ಮುಹೂರ್ತ ನಾಲ್ಕನೇಯದು. ಇದಕ್ಕೆ ಮೊದಲು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ಹಾಗೂ ಕಟ್ಟಿಗೆ ಮುಹೂರ್ತಗಳು ನಡೆದಿದ್ದವು. ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕೆ ಬೇಕಾದ ಧಾನ್ಯಗಳ ಸಂಗ್ರಹಕ್ಕಾಗಿ ನಡೆಯುವ ವುುಹೂರ್ತವೇ ಈ ಭತ್ತ ಮುಹೂರ್ತ.
ಸಂಪ್ರದಾಯದಂತೆ ಇಂದು ಮುಂಜಾನೆ ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು, ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್‌ರ ನೇತೃತ್ವದಲ್ಲಿ ಪಲಿಮಾರು ಮಠದ ಪಟ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಊರಿನ ಗಣ್ಯರು, ಮಠ ಅಭಿಮಾನಿಗಳು ಸಹಿತ ಸಕಲ ಬಿರುದುಬಾವಲಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಚಂದ್ರೇಶ್ವರ, ಅನಂತೇಶ್ವರ ದೇವ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಧ್ವ ಸರೋವರದಲ್ಲಿರುವ ಭಾಗೀರಥಿ ಗುಡಿ, ಕೃಷ್ಣಮಠದಲ್ಲಿ ನವಗ್ರಹ ಕಿಂಡಿಯ ಮುಂಭಾಗದಲ್ಲಿ ಕೃಷ್ಣ ದೇವರು, ಮುಖ್ಯಪ್ರಾಣ ದೇವರು ಸೇರಿದಂತೆ ಎಲ್ಲಾ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೇ ಭೋಜನ ಶಾಲೆ, ಸುಬ್ರಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ ಸನ್ನಿಧಾನ, ಗೋಶಾಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಆ ಬಳಿಕ ಶ್ರೀಮಠಕ್ಕೆ ಮರಳಿ ಅಲ್ಲಿಂದ ಸಾಲಂಕೃತವಾದ ಭತ್ತದ ಮುಡಿಗಳನ್ನು ನಾಲ್ಕು ಮಂದಿ ತಲೆಯಲ್ಲಿ ಹೊತ್ತುಕೊಂಡು ಹಾಗೂ ಇನ್ನೊಂದು ಚಿಕ್ಕಮುಡಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇಟ್ಟು ಚೆಂಡೆ, ವಾದ್ಯ ಬಿರುದು ಬಾವಲಿ ಸಹಿತವಾಗಿ ರಥಬೀದಿಗೆ ಪ್ರದಕ್ಷಿಣೆ ಬಂದು ಶ್ರೀ ಕೃಷ್ಣಮಠದ ಬಡಗು ಮಾಳಿಗೆ ಯಲ್ಲಿ ಮುಡಿಗಳನ್ನು ಪೀಠದಲ್ಲಿರಿಸಿ ಪೂಜಿಸಲಾಯಿತು. ಅಲ್ಲಿ ಅಷ್ಟಮಠಗಳ ಪ್ರತಿನಿಧಿಗಳಿಗೆ ನವಗ್ರಹ ದಾನ, ಫಲದಾನಗಳನ್ನು ನೀಡಲಾಯಿತು.
ಕಟ್ಟಿಗೆ ರಥಕ್ಕೆ ಶಿಖರ: ಅನಂತರ ಕೃಷ್ಣ ಮಠದ ಗೋಶಾಲೆಯ ಬಳಿ ನಿರ್ಮಾಣವಾಗಿರುವ ಕಟ್ಟಿಗೆ ರಥಕ್ಕೆ ಇಂದು ಶಿಖರವನ್ನಿಟ್ಟು ಪರಿಪೂರ್ಣ ಗೊಳಿಸಲಾಯಿತು. ಪರ್ಯಾಯದ ಎರಡು ವರ್ಷಗಳ ಅವಧಿಯ ಅನ್ನದಾಸೋಹಕ್ಕೆ ಬೇಕಾದ ಕಟ್ಟಿಗೆಗಳನ್ನು ಈಗಲೇ ಸಂಗ್ರಹಿಸಿ ಅವುಗಳನ್ನು ರಥದ ರೂಪದಲ್ಲಿ ಸಂಗ್ರಹಿಸಿಡಲಾಗಿದೆ. ಈ ರಥದ ನಿರ್ಮಾಣಕ್ಕೆ 100 ಟನ್‌ಗೂ ಅಧಿಕ ಕಟ್ಟಿಗೆಯನ್ನು ಬಳಸಲಾಗಿದೆ. ಕಟ್ಟಿಗೆ ರಥದಲ್ಲಿ ಎರಡು ಸಿಂಹ ಹಾಗೂ ದ್ವಾರಪಾಲಕರ ಗೊಂಬೆಗಳನ್ನು ಇರಿಸಲಾಯಿತು. ಮಠದ ಮೇಸ್ತ್ರಿಗಳಾದ ಶಶಿಧರ ಮೇಸ್ತ್ರಿ ಕಟ್ಟಿಗೆ ರಥದ ತುದಿಗೆ ಕಲಶವಿರಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ಡಾ.ನಿ.ಬಿ.ವಿಜಯ ಬಲ್ಲಾಳ್, ಪ್ರದೀಪ್‌ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ದೇವದಾಸ ಹೆಬ್ಬಾರ್, ಮಂಜುನಾಥ ಉಪಾಧ್ಯಾಯ, ಪರ್ಯಾಯ ಸ್ವಾಗತ ಸಮಿತಿಯ ಬಾಲಾಜಿ ರಾಘವೇಂದ್ರ ಆಚಾರ್ಯ, ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಅದಮಾರು ಮಠದ ದಿವಾನ ವೆಂಕಟರಮಣ ಮುಚ್ಚಿಂತ್ತಾಯ, ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಬೆಳ್ಳಿಪಾಡಿ ಹರಿಪ್ರಸಾದ್ ರೈ, ನಿತ್ಯಾನಂದ ಒಳಕಾಡು, ಸಗ್ರಿ ಗೋಪಾಲಕೃಷ್ಣ ಸಾಮಗ, ರಮೇಶ್‌ರಾವ್ ಬೀಡು, ಮಟ್ಟು ಲಕಿ್ಷ್ಮನಾರಾಯಣ ರಾವ್ ಉಪಸ್ಥಿತರಿದ್ದರು.







