ಪಲಿಮಾರು ಪರ್ಯಾಯಕ್ಕೆ ಚಪ್ಪರ ಮೂಹೂರ್ತ

ಉಡುಪಿ, ಡಿ.7: ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀ ಎರಡನೇ ಪರ್ಯಾಯದ ಚಪ್ಪರ ಮೂಹೂರ್ತ ಗುರುವಾರ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ನಡೆಯಿತು.
ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಶ್ರೀಕೃಷ್ಣ ಮಠ, ರಥಬೀದಿಯ ಶ್ರೀ ಅನಂತೇಶ್ವರ ಹಾಗೂ ಶ್ರೀಚಂದ್ರವೌಳೀಶ್ವರ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗೀತಾ ಮಂದಿರದ ಎದುರು ಪರ್ಯಾಯ ದರ್ಬಾರ್ ನಡೆಯಲಿರುವ ರಾಜಾಂಗಣದ ಬಳಿ ಅಡಿಕೆ ಕಂಬಗಳನ್ನು ಇಟ್ಟು ಕಲಶ ಪೂಜೆ, ಸ್ವಸ್ತಿಕ ಪೂಜೆ ಸಲ್ಲಿಸಿ, ನಂತರ ಕಂಬಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಠದ ದಿವಾನ ವೇದವ್ಯಾಸ ತಂತ್ರಿಗಳು, ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ವೆಂಕಟರಮಣ ಮುಚ್ಚಿಂತ್ತಾಯ ಕಟೀಲಿನ ಹರಿನಾರಾಯಣ ಅಸ್ರಣ್ಣ, ಕಮಲಾದೇವಿ ಅಸ್ರಣ್ಣ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಟ್ಟು ಲಕ್ಷ್ಮೀನಾರಾಯಣ ರಾವ್, ಪದ್ಮನಾಭ ಭಟ್, ಖಜಾಂಚಿ ರಮೇಶ್‌ರಾವ್ ಬೀಡು ಹಾಗೂ ಜೊತೆ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.





