ರಾಜ್ಯಾದ್ಯಂತ 15 ಭಾವೈಕ್ಯತಾ ಶಿಬಿರ: ಪ್ರಮೋದ್ ಮಧ್ವರಾಜ್
ಬೆಂಗಳೂರು, ಡಿ.7: 2017-18ನೆ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೋಶಕ್ಕೆ ಕೇಂದ್ರ ಸರಕಾದಿಂದ 13 ಕೋಟಿ 21 ಲಕ್ಷ ರೂ.ಹಾಗೂ ರಾಜ್ಯ ಸರಕಾರದಿಂದ 13 ಕೋಟಿ 65 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ವಿಕಾಸ ಸೌಧದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ವಾರ್ಷಿಕ ವರದಿ ಸಲ್ಲಿಕೆ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯಾದ್ಯಂತ 15 ಭಾವೈಕ್ಯತಾ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಒಂದು ಶಿಬಿರಕ್ಕೆ ತಲಾ 5 ಲಕ್ಷದಂತೆ ಒಟ್ಟು 75 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ನಿಮ್ಹಾನ್ಸ್ ಸಂಸ್ಥೆ ನಡೆಸುವ ಜೀವನ ಕೌಶಲ್ಯ ತರಬೇತಿಗೆ ಸಹ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಷ್ಟ್ರೀಯ ಸೇವಾ ಶಿಬಿರಗಳಲ್ಲಿ ಗಾಂಧಿ, ಸರ್ವಜ್ಞ, ಅಂಬೇಡ್ಕರ್‌ರವರ ಮೌಲ್ಯಗಳು, ಸಂಸ್ಕೃತ, ಸುಭಾಷಿತಗಳನ್ನು ಮಕ್ಕಳಿಗೆ ಮನನ ಮಾಡುವುದು ಮುಖ್ಯಎಂದು ಸಚಿವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನೆಯ 2016-17ನೆ ಸಾಲಿನ ವಾರ್ಷಿಕ ವರದಿಯನ್ನು ಸಚಿವರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಕುಲಪತಿಗಳು, ಎನ್ನೆಸ್ಸೆಸ್ಪದಾಧಿಕಾರಿಗಳು ಉಪಸ್ಥಿತರಿದ್ದರು.







