ಮೃತ ಬಾಲಕಿಯ ಕುಟುಂಬಕ್ಕೆ 700 ಶೇ. ಅಧಿಕ ಶುಲ್ಕ ವಿಧಿಸಿದ ಫೋರ್ಟಿಸ್ ಆಸ್ಪತ್ರೆ!

ಹೊಸದಿಲ್ಲಿ,ಡಿ.7: ಗುರ್ಗಾಂವ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಏಳರ ಹರೆಯದ ಆದ್ಯಾ ಸಿಂಗ್‌ಳ ಸಾವು ಒಂದು ‘ಕೊಲೆ’ಯಾಗಿದೆ ಎಂದು ಹರ್ಯಾಣದ ಸಚಿವರೋರ್ವರು ಹೇಳಿದ್ದಾರೆ. ಆಸ್ಪತ್ರೆಯು ಅಧಿಕ ಶುಲ್ಕವನ್ನು ವಿಧಿಸಿತ್ತು ಮತ್ತು ಘೋರ ನಿರ್ಲಕ್ಷವನ್ನು ಪ್ರದರ್ಶಿಸಿತ್ತು ಎಂಬ ಆರೋಪಗಳನ್ನು ಸರಕಾರದ ತನಿಖೆಯು ದೃಢಪಡಿಸಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಫೋರ್ಟಿಸ್ ಈಗ ಪೊಲೀಸ್ ಪ್ರಕರಣವನ್ನು ಎದುರಿಸುವ ಜೊತೆಗೆ ತಾನು ಲೀಸ್‌ಗೆ ಪಡೆದುಕೊಂಡಿರುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಸರಕಾರದ ತನಿಖೆಯು ಆಸ್ಪತ್ರೆಯ ಹಲವಾರು ಅಕ್ರಮಗಳನ್ನು ಬಯಲಿಗೆಳೆದಿದೆ. ತೀವ್ರ ಡೆಂಗ್ ಜ್ವರದಿಂದ ದಾಖಲಾಗಿದ್ದ ಆದ್ಯಾ ಕಳೆದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟ ಬಳಿಕ ಆಸ್ಪತ್ರೆಯು ಆಕೆಯ ಪೋಷಕರ ಕೈಗೆ 15.5 ಲ.ರೂ.ಗಳ ಬಿಲ್ ನೀಡಿತ್ತು.
ತನ್ಮಧ್ಯೆ ಪ್ರಕರಣದ ಹಿಂದೆ ಬೀಳದಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅನ್ಯಾಯದ ವಿರುದ್ಧ ತನ್ನ ಅಭಿಯಾನವನ್ನು ಅಂತ್ಯಗೊಳಿಸುವಂತೆ ತನ್ನ ಮನವೊಲಿಸಲು ಆಸ್ಪತ್ರೆಯು ಹಣದ ಆಮಿಷವನ್ನು ಒಡ್ಡಿತ್ತು ಎಂದು ಆದ್ಯಾಳ ತಂದೆ ಜಯಂತ ಸಿಂಗ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ತನ್ನ ಕಚೇರಿಯ ಬಳಿ ಬಂದು ತನ್ನನ್ನು ಭೇಟಿಯಾದ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಕಾನೂನು ಕ್ರಮವನ್ನು ಕೈಬಿಟ್ಟರೆ ನೀವು ಚೆಕ್ ಮೂಲಕ ನೀಡಿದ್ದ ಹಣವನ್ನು ಮರಳಿಸುತ್ತೇವೆ ಮತ್ತು ಹೆಚ್ಚುವರಿಯಾಗಿ 25 ಲ.ರೂ.ನೀಡುತ್ತೇವೆ ಎಂಬ ಕೊಡುಗೆಯನ್ನು ಮುಂದಿಟ್ಟಿದ್ದರು ಎಂದು ತಿಳಿಸಿದರು.
ಈ ಆರೋಪಕ್ಕೆ ಆಸ್ಪತ್ರೆಯು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಆದ್ಯಾಳನ್ನು ಆ.31ರಂದು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೆ.14ರಂದು ಆಕೆ ಕೊನೆಯುಸಿರೆಳೆದಿದ್ದಳು.
ಆಸ್ಪತ್ರೆಯು ನಿರ್ಲಕ್ಷ್ಯ ಪ್ರದರ್ಶಿಸುವ ಜೊತೆಗೆ ಅನೀತಿಯುತ ಮತ್ತು ಕಾನೂನುಬಾಹಿರ ಕೃತ್ಯಗಳನ್ನೆಸಗಿದೆ ಎಂದು 41 ಪುಟಗಳ ವಿಚಾರಣಾ ವರದಿಯು ಹೇಳಿದೆ. ಆದ್ಯಾಗೆ ನೀಡಿದ್ದ ಔಷಧಿಗಳಲ್ಲಿ ಶೇ.108ರಷ್ಟು ಲಾಭಗಳನ್ನು ಮಾಡಿದ್ದ ಅದು, ಸಿರಿಂಜ್, ಕೈಗವಸು ಇತ್ಯಾದಿ ಬಳಸಿ ಎಸೆಯುವ ಸಾಧನಗಳಿಗೆ ಶೇ.717ರಷ್ಟು ಅಧಿಕ ಶುಲ್ಕವನ್ನು ವಿಧಿಸಿದೆ ಎಂದೂ ಬೆಟ್ಟು ಮಾಡಿದೆ.
ಆದ್ಯಾಳನ್ನು ಒಯ್ಯಲು ಆಸ್ಪತ್ರೆಯು ನಿಯಮಗಳನ್ನು ಉಲ್ಲಂಘಿಸಿ,ಅತ್ಯಾಧುನಿಕ ಆ್ಯಂಬುಲೆನ್ಸ್‌ನ ಬದಲು ಆಮ್ಲಜನಕ ಮತ್ತು ಇತರ ಸೌಲಭ್ಯಗಳ ಕೊರತೆಯಿದ್ದ ಆ್ಯಂಬುಲೆನ್ಸ್‌ನ್ನು ಒದಗಿಸಿತ್ತು ಎಂದು ವರದಿಯು ಹೇಳಿದೆ.







