ಕಾಂಗ್ರೆಸ್ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಪಕ್ಷದ ಪ್ರವಾಸ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಡಿ.7: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 124 ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಪರವಾಗಿ ಪ್ರವಾಸ ಕೈಗೊಳ್ಳಲಿದ್ದಾರೆ. ನಮ್ಮ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಪಕ್ಷದ ಪರವಾಗಿ ನಾವು ಪ್ರವಾಸ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ನಂತರ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದುದರಿಂದ, ಪಕ್ಷದ ಪ್ರವಾಸವನ್ನು ಡಿ.22ರ ನಂತರ ಆರಂಭಿಸಲಾಗುವುದು ಎಂದರು.
ರಾಹುಲ್‌ಗಾಂಧಿ ರಾಜ್ಯಕ್ಕೆ ಬಂದಾಗ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಈ ಸಂಬಂಧ ಅವರೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಕಳೆದ ಮೂರು ದಿನಗಳಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿದ್ದೇವೆ. 2018ರ ವಿಧಾನಸಭಾ ಚುನಾವಣೆಗೆ ಸಜ್ಜಾಗುವಂತೆ, ತಮ್ಮ ಕ್ಷೇತ್ರಗಳಲ್ಲಿ ಗೆಲ್ಲುವ ರಣನೀತಿ ರೂಪಿಸಿಕೊಳ್ಳುವಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಮೊದಲ ಬಾರಿಗೆ ವ್ಯವಸ್ಥಿತವಾಗಿ 54,261 ಬೂತ್‌ಗಳಲ್ಲಿ ಸಮಿತಿ ರಚನೆ ಮಾಡಿ, ಅಧ್ಯಕ್ಷ, ಉಪಾಧ್ಯಕ್ಷ, ಏಜೆಂಟ್, ಸದಸ್ಯರನ್ನು ನೇಮಕ ಮಾಡಿದ್ದೇವೆ. ಅಲ್ಲದೆ, ತಹಶೀಲ್ದಾರ್‌ಗಳಿಗೆ ಬೂತ್ ಸಮಿತಿಗಳ ಪಟ್ಟಿಯನ್ನು ಹಂತ ಹಂತವಾಗಿ ಹಸ್ತಾಂತರ ಮಾಡಲಾಗುತ್ತಿದೆ. ಪಕ್ಷದ ಎಲ್ಲ ಕಾರ್ಯಕ್ರಮಗಳು ಬೂತ್‌ಮಟ್ಟದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಶೇ.86.65ರಷ್ಟು ಕಾರ್ಯಕ್ರಮ ಯಶಸ್ವಿಯಾಗಿದೆ. ಸರಕಾರದ ಸಾಧನೆಗಳನ್ನು ಈ ಕಾರ್ಯಕ್ರಮದ ಮೂಲಕ 1.10 ಕೋಟಿ ಕುಟುಂಬಗಳ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಸುಳ್ಳು ಹೇಳದೆ, ಪುಸ್ತಕದ ಮೂಲಕ ಸತ್ಯವನ್ನು ತಿಳಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಇಂದಿರಾ ದೀಪನಮನ ಕಾರ್ಯಕ್ರಮವು ಯಶಸ್ವಿಯಾಗಿದೆ. ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಸೇವಾದಳ, ಮಹಿಳಾ ಘಟಕಗಳ ಮೂಲಕ ಪ್ರತ್ಯೇಕ ಕಾರ್ಯಕ್ರಮಗಳು ನಡೆಯಲಿವೆ. ಡಿ.28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಲಿದ್ದು, ಅಂದು ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲಾಗುವುದು. ಅಲ್ಲದೆ, ಐದು ಕಿ.ಮೀ.ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ವೀಕ್ಷಕರ ನೇಮಕ: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ವೀಕ್ಷಕರಿಗೆ ನೀಡಲಾಗುವುದು. ಶೀಘ್ರದಲ್ಲೆ ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರನ್ನು ನೇಮಕ ಮಾಡಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಸೇರುತ್ತಿಲ್ಲ. ಯಾತ್ರೆಯುದ್ದಕ್ಕೂ ಹಿಟ್ ಅಂಡ್ ರನ್ ಹೇಳಿಕೆಗಳನ್ನೆ ಬಿಜೆಪಿ ಮುಖಂಡರು ನೀಡುತ್ತಿದ್ದಾರೆ. ಸರಕಾರದ ವಿರುದ್ಧ ಮಾತನಾಡಲು ಅವರ ಬಳಿ ಯಾವ ವಿಷಯಗಳು ಇಲ್ಲ ಎಂದು ಪರಮೇಶ್ವರ್ ಹೇಳಿದರು.
ಭಿನ್ನಾಭಿಪ್ರಾಯವಿಲ್ಲ: ನನ್ನ ಹಾಗೂ ಮುಖ್ಯಮಂತ್ರಿ ನಡುವೆ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಒಟ್ಟಿಗೆ ರಾಜ್ಯ ಪ್ರವಾಸ ಮಾಡುತ್ತೇವೆ. ಒಟ್ಟಿಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಏಳು ವರ್ಷಗಳಿಂದ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದು, ನಮ್ಮ ನಡುವೆ ಯಾವುದೆ ಜಗಳ, ಕಿತ್ತಾಟ ನಡೆದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.
ಜೆಡಿಎಸ್ ಬಂಡಾಯ ಶಾಸಕರ ಸೇರ್ಪಡೆ: ಜೆಡಿಎಸ್ ಬಂಡಾಯ ಶಾಸಕರು ಬಹುತೇಕವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಒಂದು ದೊಡ್ಡ ಸಮಾವೇಶ ಮಾಡುವ ಮೂಲಕ ಎಲ್ಲ 7 ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆಯಾಗಲಿದ್ದಾರೆ. ಆರು ತಿಂಗಳು ಮುಂಚಿತವಾಗಿ ಬೇರೆ ಪಕ್ಷಕ್ಕೆ ಹೋದರೆ ಶಾಸಕ ಸ್ಥಾನಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ಅವರು ಅಧಿಕೃತವಾಗಿ ಇನ್ನು ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಪರಮೇಶ್ವರ್ ಹೇಳಿದರು.
ಯಾರೋ ಒಂದಿಬ್ಬರು ಪಕ್ಷ ಬಿಟ್ಟು ಬೇರೆಡೆ ಹೋಗಬಹುದು. ಬೇರೆ ಪಕ್ಷಗಳಿಂದಲೂ ಇಲ್ಲಿಗೆ ಬರಬಹುದು. ಆದರೆ, ಹಿಂಡು ಹಿಂಡಾಗಿ ಯಾರೂ ಪಕ್ಷಾಂತರ ಮಾಡುವುದಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ಎಂದು ಹೈಕಮಾಂಡ್ ಹೇಳಿದರೆ ಎಲ್ಲರಿಗೂ ಸಿಗುತ್ತದೆ. ಇಲ್ಲವಾದರೆ, ಕೆಲವು ಬದಲಾವಣೆಗಳಾಗಬಹುದು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ಎಂಬುದು ಹೈಕಮಾಂಡ್ ಮಟ್ಟದಲ್ಲೆ ನಿರ್ಧಾರವಾಗಬೇಕು ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ವಿರುದ್ಧದ ಅಂಕಪಟ್ಟಿ ಹಗರಣದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್ ಮನವಿ ಕೊಟ್ಟಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತೇನೆ. ಬಸವರಾಜರಾಯರಡ್ಡಿ ಜತೆಯೂ ಮಾತನಾಡುತ್ತೇನೆ ಎಂದರು.







