2005ರ ಪ್ರಶ್ನೆಗಾಗಿ ಲಂಚ ಹಗರಣ: 11 ಮಾಜಿ ಸಂಸದರ ವಿರುದ್ಧ ಆರೋಪಗಳನ್ನು ರೂಪಿಸಿದ ನ್ಯಾಯಾಲಯ

ಹೊಸದಿಲ್ಲಿ,ಡಿ.7: ಇಲ್ಲಿಯ ತೀಸ್ ಹಜಾರಿ ನ್ಯಾಯಾಲಯವು 2005ರ ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಗುರುವಾರ 11 ಮಾಜಿ ಸಂಸದರು ಸೇರಿದಂತೆ 12 ಜನರ ವಿರುದ್ಧ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳನ್ನು ರೂಪಿಸಿತು.
ವಿಶೇಷ ನ್ಯಾಯಾಧೀಶ ಕಿರಣ್ ಬನ್ಸಲ್ ಅವರು ಮುಂದಿನ ವರ್ಷದ ಜ.12ರಂದು ವಿಚಾರಣೆಯನ್ನು ಆರಂಭಿಸಲಿದ್ದಾರೆ.
ಮಾಜಿ ಸಂಸದರಾದ ಬಿಜೆಪಿಯ ವೈ.ಜಿ.ಮಹಾಜನ, ಛತ್ತರಪಾಲ್ ಸಿಂಗ್ ಲೋಧಾ, ಅಣ್ಣಾ ಸಾಹೇಬ್ ಎಂ.ಕೆ.ಪಾಟೀಲ, ಚಂದ್ರಪ್ರತಾಪ ಸಿಂಗ್, ಪ್ರದೀಪ ಗಾಂಧಿ ಮತ್ತು ಸುರೇಶ ಚಂದೇಲ್, ಬಿಎಸ್‌ಪಿಯ ನರೇಂದ್ರ ಕುಮಾರ ಖುಷ್ವಾಹಾ, ಲಾಲಚಂದ್ ಕೋಲ ಮತ್ತು ರಾಜಾ ರಾಮಪಾಲ್, ಆರ್‌ಜೆಡಿಯ ಮನೋಜ ಕುಮಾರ್ ಮತ್ತು ಕಾಂಗ್ರೆಸ್‌ನ ರಾಮಸೇವಕ ಸಿಂಗ್ ಅವರೊಂದಿಗೆ ರಾಮಪಾಲ್ ಅವರ ಆಗಿನ ಆಪ್ತ ಸಹಾಯಕ ರವೀಂದ್ರ ಕುಮಾರ್ ಅವರೂ ಆರೋಪಿಗಳಾಗಿದ್ದಾರೆ.
ಇಬ್ಬರು ಪತ್ರಕರ್ತರು ಆಗಿನ ಸಂಸದರ ವಿರುದ್ಧ ಕುಟುಕು ಕಾರ್ಯಾಚರಣೆಯನ್ನು ನಡೆಸಿದ್ದು, ಇದರ ವೀಡಿಯೊವನ್ನು ಖಾಸಗಿ ಸುದ್ದಿವಾಹಿನಿಯೊಂದು 2005,ಡಿ.12ರಂದು ಪ್ರಸಾರ ಮಾಡಿತ್ತು. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ ಈ ಸಂಸದರು ಹಣ ಪಡೆದುಕೊಂಡಿದ್ದು, ಈ ಕುಟುಕು ಕಾರ್ಯಾಚರಣೆಯು ಬಳಿಕ ಪ್ರಶ್ನೆಗಾಗಿ ಲಂಚ ಹಗರಣ ಎಂದು ಕುಖ್ಯಾತಿ ಪಡೆದಿತ್ತು.
2005,ಡಿಸೆಂಬರ್‌ನಲ್ಲಿ 10 ಸಂಸದರನ್ನು ಲೋಕಸಭೆಯಿಂದ ಮತ್ತು ಲೋಧಾರನ್ನು ರಾಜ್ಯಸಭೆಯಿಂಂದ ಉಚ್ಚಾಟಿಸಲಾಗಿತ್ತು.
ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಎನ್ನಲಾದ ಇನ್ನೋರ್ವ ಆರೋಪಿ ವಿಜಯ್ ಫೋಗಟ್ ನಿಧನನಾಗಿರುವುದರಿಂದ ಆತನ ವಿರುದ್ಧದ ಕಾನೂನು ಕ್ರಮವನ್ನು ಕೈಬಿಡಲಾಗಿದೆ.
ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸುವಂತೆ ನ್ಯಾಯಾಲಯವು ಆ.10ರಂದೇ ಆದೇಶಿಸಿತ್ತಾದರೂ, ಪದೇ ಪದೇ ವಿನಾಯಿತಿಯನ್ನು ಕೋರುವ ಮೂಲಕ ಆರೋಪಿಗಳ ಗೈರುಹಾಜರಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. 2009ರಲ್ಲಿ ದಿಲ್ಲಿ ಪೊಲೀಸರು ಪ್ರಕರಣದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧಕ್ಕೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಇಬ್ಬರು ಪತ್ರಕರ್ತರ ವಿರುದ್ಧವೂ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದ್ದು, ವಿಚಾರಣಾ ನ್ಯಾಯಾಲಯವು ಅವರಿಗೆ ಸಮನ್ಸ್ ಹೊರಡಿಸಿತ್ತು. ಆದರೆ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯವು ಅವರ ವಿರುದ್ಧ ಕಲಾಪಗಳನ್ನು ರದ್ದುಗೊಳಿಸಿತ್ತು.







