ಜಾರ್ಖಂಡ್ ಸರಕಾರದ ಖಾತೆಯಿಂದ ಬಿಲ್ಡರ್‌ಗೆ 100 ಕೋ.ರೂ.ವರ್ಗಾವಣೆ: ಸಿಬಿಐ ತನಿಖೆ ಪ್ರಾರಂಭ

ಹೊಸದಿಲ್ಲಿ,ಡಿ.7: ಎಸ್‌ಬಿಐನಲ್ಲಿಯ ಜಾರ್ಖಂಡ್ ಸರಕಾರದ ಮಧ್ಯಾಹ್ನದೂಟ ಕಾರ್ಯಕ್ರಮದ ಖಾತೆಯಿಂದ 100 ಕೋ.ರೂ.ಗಳನ್ನು ಖಾಸಗಿ ಬಿಲ್ಡರ್‌ಗೆ ಅಕ್ರಮವಾಗಿ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.
ಸಿಬಿಐ ಬುಧವಾರ ರಾಂಚಿಯಲ್ಲಿ ಆರೋಪಿಗಳ ನಿವಾಸಗಳು ಮತ್ತು ಭಾನು ಕನ್‌ಸ್ಟ್ರಕ್ಷನ್‌ನ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.
ಕಂಪನಿ, ಅದರ ಪಾಲುದಾರರಾದ ಸಂಜಯಕುಮಾರ ತಿವಾರಿ ಮತ್ತು ಸುರೇಶ ಕುಮಾರ ಹಾಗೂ ಈಗ ಸೇವೆಯಿಂದ ಅಮಾನತುಗೊಂಡಿರುವ ಎಸ್‌ಬಿಐನ ಹಟಿಯಾ ಶಾಖೆಯ ಮಾಜಿ ಉಪ ಪ್ರಬಂಧಕ ಅಜಯ್ ಓರಾನ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಓರಾನ್ ಅವರು ಅಪ್ರಾಮಾಣಿಕತೆ ಮತ್ತು ಅಧಿಕಾರ ದುರುಪಯೋಗದ ಮೂಲಕ ರಾಜ್ಯ ಮಧ್ಯಾಹ್ನ್ ಭೋಜನ್ ಪ್ರಾಧಿಕಾರಣ(ಆರ್‌ಎಂಬಿಪಿ)ದ ಖಾತೆಯಿಂದ 100.01 ಕೋ.ರೂ.ಗಳನ್ನು ಭಾನು ಕನ್‌ಸ್ಟ್ರಕ್ಷನ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಎಸ್‌ಬಿಐ ಅಧಿಕಾರಿಯೋರ್ವರು ನೀಡಿದ್ದ ದೂರಿನ ಮೇರೆಗೆ ಈ ಎಫ್‌ಐಆರ್ ದಾಖಲಾಗಿತ್ತು.
2017,ಆ.5ರಂದು ತನ್ನ ಖಾತೆಯಿಂದ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿಯ ಖಾತೆಗಳಿಗೆ 120.31 ಕೋ.ರೂ.ಗಳ ವರ್ಗಾವಣೆಗಾಗಿ ಜಾರ್ಖಂಡ್ ಸರಕಾರದಿಂದ ನಿರ್ದೇಶವನ್ನು ಎಸ್‌ಬಿಐ ಹಟಿಯಾ ಶಾಖೆಯು ಸ್ವೀಕರಿಸಿತ್ತು. ಈ ಪೈಕಿ 20.29 ಕೋ.ರೂ.ಗಳನ್ನು ಎಸ್‌ಬಿಐಗೆ ಮತ್ತು 100.01 ಕೋ.ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿಯ ಖಾತೆಗೆ ವರ್ಗಾಯಿಸಬೇಕಿತ್ತು. ಆರ್‌ಟಿಜಿಎಸ್ ಮತ್ತು ನೆಫ್ಟ್ ಮೂಲಕ ಸಗಟು ವರ್ಗಾವಣೆಗಾಗಿ ಆರ್‌ಎಂಬಿಪಿಯ ಖಾತೆಯಲ್ಲಿ 100.01 ಕೋ.ರೂ.ಗಳನ್ನು ಖರ್ಚು ಹಾಕಲಾಗಿತ್ತು. ಆದರೆ ಅಪ್‌ಲೋಡಿಂಗ್‌ನಲ್ಲಿ ವೈಫಲ್ಯದಿಂದಾಗಿ ಅಷ್ಟೂ ಮೊತ್ತ ಶಾಖೆಯ ಅಧಿಕೃತ ಮತ್ತು ಸಸ್ಪೆನ್ಸ್ ಖಾತೆಗೆ ವಾಪಸಾಗಿತ್ತು. ಓರಾನ್ ಈ ಹಣವನ್ನು ಆರ್‌ಎಂಬಿಪಿ ಖಾತೆಗೆ ಮರಳಿ ಜಮಾ ಮಾಡುವ ಬದಲು ಭಾನು ಕನ್‌ಸ್ಟ್ರಕ್ಷನ್‌ನ ಚಾಲ್ತಿ ಖಾತೆಗೆ ವರ್ಗಾಯಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆಪಾದಿಸಲಾಗಿದೆ.
ತಿವಾರಿ ಮತ್ತು ಕುಮಾರ ಈ ಹಣವನ್ನು ತಮ್ಮ ವಿವಿಧ ಖಾತೆಗಳಿಗೆ ವರ್ಗಾಯಿಸಿ ಕೊಂಡು ದುರುಪಯೋಗ ಪಡಿಸಿಕೊಂಡಿದ್ದರು. ಈ ಪೈಕಿ 76.29 ಕೋ.ರೂ.ಗಳನ್ನು ವಿವಿಧ ಬ್ಯಾಂಕುಗಳ ವಿವಿಧ ಖಾತೆಗಳಿಂದ ವಶಪಡಿಸಿಕೊಳ್ಳುವಲ್ಲಿ ಎಸ್‌ಬಿಐ ಯಶಸ್ವಿ ಯಾಗಿದ್ದು, ಬಾಕಿ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.







