ಬೆಂಗಳೂರು : ಎಫ್‌ಡಿಐ ಉದ್ಯೋಗಿಯ ಕೊಲೆ
ಬೆಂಗಳೂರು, ಡಿ.7: ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಎಫ್‌ಡಿಐ ಉದ್ಯೋಗಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮಂಡ್ಯದ ಉದಯ್ ಕುಮಾರ್(34) ಕೊಲೆಯಾದ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಫ್‌ಡಿಎ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ:ಉದಯ್‌ಕುಮಾರ್ ವಿಠ್ಠಲ್ ಅವರು ನಂದಿನಿ ಲೇಔಟ್‌ನ ಪೊಲೀಸ್ ವಸತಿ ಗೃಹದ ಮೊದಲ ಮಹಡಿಯಲ್ಲಿ ವಾಸವಾಗಿದ್ದು, ಇವರೊಂದಿಗೆ ರಾಜು ಸಹ ಇದ್ದರು. ಉದಯ್‌ಕುಮಾರ್ ಗೆ ವಸತಿಗೃಹವೊಂದು ಬೇಕಾಗಿದ್ದರಿಂದ ಮನೆ ಖಾಲಿ ಇದೆಯೇ ಎಂಬುದನ್ನು ನೋಡಲು ವಿಠ್ಠಲ್ ಅವರ ಮನೆಗೆ ಬಂದಿದ್ದರು. ವಿಠ್ಠಲ್ ಮನೆಗೆ ಉದಯ್ ಬಂದಿದ್ದಾಗ ಇವರ ಮನೆಯಲ್ಲಿದ್ದ ರಾಜು ಸೇರಿ ಈ ಮೂವರು ಮದ್ಯ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ 11 ಗಂಟೆ ಸಂದರ್ಭದಲ್ಲಿ ವಿಠ್ಠಲ್ ಮನೆಯಲ್ಲಿ ಉಳಿದುಕೊಳ್ಳುವ ವಿಚಾರವಾಗಿ ಉದಯ್ ಹಾಗೂ ರಾಜು ನಡುವೆ ಜಗಳ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಒಂದು ಹಂತದಲ್ಲಿ ಉದಯ್ ನನ್ನು ರಾಜು ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಉದಯ್ ಆಯತಪ್ಪಿ14 ಅಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ ಮದ್ಯ ಸೇವನೆ ವೇಳೆ ಜಗಳ ಮಾಡಿ ನನ್ನ ಗಂಡನನ್ನು ಒಂದನೆ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಉದಯ್ ಕುಮಾರ್ ಪತ್ನಿ ದೂರಿನಲ್ಲಿ ಆರೋಪಿಸಿ ನಂದಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.







