ಸೈಕಲ್ ಸೇವೆ ನೀಡಲು ಮುಂದಾದ ಮೊಬಿಸಿ ಎಂಬ ಖಾಸಗಿ ಕಂಪೆನಿ
ಬೆಂಗಳೂರು, ಡಿ.7: ಮಾಲಿನ್ಯ ತಡೆಗೆ ಬೆಂಗಳೂರಿನಲ್ಲಿ ಸೈಕಲ್‌ಗಳನ್ನು ಪರಿಚಯಿಸಲು ರಾಜ್ಯ ಸರಕಾರ ಮುಂದಾಗಿದೆ. ಆದರೆ, ಖಾಸಗಿ ಕಂಪೆನಿಯೊಂದು ಇದಕ್ಕೂ ಮೊದಲೇ ನಗರದ ರಸ್ತೆಗಳಿಗೆ ಸೈಕಲ್ ಇಳಿಸಲು ಮುಂದಾಗಿದೆ.
ರಸ್ತೆಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಪರಿಸರದಲ್ಲಿನ ಕಲ್ಮಶವನ್ನು ತಪ್ಪಿಸಲು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್ವಾಲ್ ಎಂಬುವವರು ಮೊಬಿಸಿ ಎಂಬ ಕಂಪೆನಿ ಆರಂಭ ಮಾಡಿದ್ದು, ದೇಶದ ಮೊಟ್ಟ ಮೊದಲ ಡಾಕ್ಲೆಸ್ ಬೈಸಿಕಲ್ ಹಂಚಿಕೆ ಮೂಲಕ ಸೈಕಲ್ ಸೇವೆ ನೀಡಲಿದೆ.
ಈ ಕಂಪನಿಯು ಗುರಗಾಂವ್ ಮೂಲದ ಗ್ರೀನ್ ಟೆಕ್ ಕಂಪೆನಿಯಾಗಿದ್ದು, ಭಾರತದಲ್ಲಿ ವಿಶಿಷ್ಟವಾದ ಮತ್ತು ಇ-ಮಾದರಿಯ ಮೊದಲ ‘ಉಬರ್ ಫಾರ್ ಸೈಕಲ್ಸ್’ ಮಾದರಿಯನ್ನು ಬಳಕೆದಾರರಿಗೆ ಪ್ರಸ್ತುತಪಡಿಸುತ್ತದೆ. ಡಾಕ್ಲೆಸ್ ಬೈಸಿಕಲ್ ಹಂಚಿಕೆ ಅಪ್ಲಿಕೇಶನ್, ಮೊಬಿಸಿ ಈಗ ಆಂಡ್ರಾಯ್ಡಾ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಇದರ ಪ್ರಾಯೋಗಿಕ ಬಳಕೆ ಆರಂಭವಾಗಿದೆ. ಈ ಅಪ್ಲಿಕೇಶನ್ ಮುಂದಿನ ಎರಡು ದಿನಗಳೊಳಗೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುತ್ತದೆ.
ಫುಲ್ ಹೈಟೆಕ್ ಮೊಬಿಸಿ ಸ್ಮಾರ್ಟ್ ಬೈಕ್‌ಗಳನ್ನು ಐಒಟಿ ಬೀಗಗಳ ಮತ್ತು ಜಿಪಿಎಸ್ ಅಳವಡಿಕೆ ಮೂಲಕ ಜಾರಿ ಮಾಡುತ್ತಿದ್ದು, ನಿಲುಗಡೆ ಅಥವಾ ನಿಲ್ದಾಣಗಳಿಲ್ಲದೆ ಇವುಗಳನ್ನು ಬಳಕೆ ಮಾಡಬಹುದಾಗಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ, ಸಮೀಪದ ಸೈಕಲ್ ಇರುವ ಸ್ಥಳ ಹುಡುಕಿ ಅದಕ್ಕೆ ನೀಡುವ ಕ್ಯೂಆರ್ ಕೋಡ್ ಬಳಸಿಬೀಗ ತೆಗೆದು ಉಪಯೋಗಿಸಬಹುದಾಗಿದೆ.
5 ಸಾವಿರ ಸೈಕಲ್: ನಗರದಲ್ಲಿ 5 ಸಾವಿರ ಬೈಸಿಕಲ್‌ಗಳೊಂದಿಗೆ ಪ್ರಾರಂಭ ಮಾಡಲಾಗುತ್ತಿದ್ದು, ಮುಂದಿನ 6 ತಿಂಗಳಲ್ಲಿ 50 ಸಾವಿರಕ್ಕೆ ಏರಿಕೆ ಮಾಡುವ ನಿರೀಕ್ಷೆಯಿದೆ ಎಂದು ಗ್ರೀನ್ ಟೆಕ್ ಕಂಪೆನಿ ಸಹ ಸಂಸ್ಥಾಪಕ ಆಕಾಶ ಗುಪ್ತಾ ಮಾಹಿತಿ ನೀಡಿದ್ದಾರೆ.
ಮಾಸಿಕ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ತಿಂಗಳಿಗೆ 99 ರೂ.ಗಳು ಪಾವತಿಸುವುದರ ಮೂಲಕ ಪ್ರತಿ ದಿನ 2 ಗಂಟೆಗಳ ಕಾಲ ಸೈಕಲ್ ಬಳಸಬಹುದು. ಹೆಚ್ಚುವರಿಯಾಗಿ ಆಧಾರ್ ಕಾರ್ಡ್, ಗುರುತು ನೀಡಬೇಕಾಗಿರುವುದಲ್ಲದೆ, ಭದ್ರತಾ ಠೇವಣಿಯಾಗಿ 999 ರೂ.ಗಳು ಇಡಬೇಕು. ವಿದ್ಯಾರ್ಥಿಗಳು ಕಾಲೇಜಿನ ಗುರುತು ಪತ್ರ ನೀಡಿ 499 ರೂ.ಗಳು ಭದ್ರತಾ ಠೇವಣಿ ಇಡಬಹುದಾಗಿರುತ್ತದೆ ಎಂದು ಆಕಾಶ ಗುಪ್ತಾ ತಿಳಿಸಿದ್ದಾರೆ.







