ಆಧಾರ್ ಜೋಡಣೆಗೆ ಅಂತಿಮ ಗಡುವು ವಿಸ್ತರಣೆ ಇಲ್ಲ; ಪ್ರಾಧಿಕಾರ ಸ್ಪಷ್ಟನೆ

ಹೊಸದಿಲ್ಲಿ, ಡಿ.7: ಬ್ಯಾಂಕ್ ಖಾತೆಗಳು, ಪಾನ್‌ಕಾರ್ಡ್‌ಗಳು ಹಾಗೂ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಆಧಾರ್ ಜೊತೆ ದೃಢೀಕರಿಸಲು ವಿಧಿಸಲಾಗಿರುವ ಅಂತಿಮ ಗಡುವು ಸಿಂಧುತ್ವವನ್ನು ಹೊಂದಿದೆ ಹಾಗೂ ಕಾನೂನುಬದ್ಧವಾದುದಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (ಯುಐಡಿಎಐ) ಗುರುವಾರ ಸ್ಪಷ್ಟಪಡಿಸಿದೆ.
ಆಧಾರ್ ಸಂಖ್ಯೆಯನ್ನು ಓದಗಿಸುವ ಮೂಲಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಹಾಗೂ ಪಾನ್ ಸಂಖ್ಯೆಯನ್ನು ದೃಢೀಕರಿಸಿಕೊಳ್ಳುವುದಕ್ಕೆ ಈ ವರ್ಷದ ಡಿಸೆಂಬರ್ 31 ಅಂತಿಮಗಡುವಾಗಿರುತ್ತದೆ. ಆದರೆ ಸಿಮ್ ಕಾರ್ಡ್‌ಗಳ ದೃಢೀಕರಣಕ್ಕೆ ಮುಂದಿನ ವರ್ಷದ ಫೆಬ್ರವರಿ 6ನ್ನು ಅಂತಿಮಗಡುವಾಗಿ ನಿಗದಿಪಡಿಸಲಾಗಿದೆ. ಬ್ಯಾಂಕ್‌ಖಾತೆ, ಪಾನ್, ಸಿಮ್‌ಕಾರ್ಡ್ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿರುವ ಸಂದೇಶಗಳನ್ನು ನಿರಾಕರಿಸಿರುವ ಪ್ರಾಧಿಕಾರವು, ಈವರೆಗೆ ಅಂತಹ ಯಾವುದೇ ತಡೆಯಾಜ್ಞೆ ವಿಧಿಸಲಾಗಿಲ್ಲವೆಂದು ಸ್ಪಷ್ಟಪಡಿಸಿದೆ.
ಕಪ್ಪುಹಣವನ್ನು ನಿರ್ಮೂಲನೆಗೊಳಿಸಲು ಹಾಗೂ ಅಘೋಷಿತ ಸಂಪತ್ತನ್ನು ಕಾನೂನಿನ ವ್ಯಾಪ್ತಿಗೆ ತರಲು ಕೇಂದ್ರ ಸರಕಾರವು ಬ್ಯಾಂಕ್‌ಖಾತೆ ಹಾಗೂ ಪಾನ್ ಕಾರ್ಡ್‌ಗಳನ್ನು ಆಧಾರ್ ಸಂಖ್ಯೆಯ ಜೊತೆ ದೃಢೀಕರಿಸುವುದನ್ನು ಕಡ್ಡಾಯ ಗೊಳಿಸಿದೆ.ಮೊಬೈಲ್ ಫೋನ್ ಬಳಕೆದಾರರ ಗುರುತನ್ನು ದೃಢಪಡಿಸಲೂ ಸಿಮ್ ಕಾರ್ಡ್‌ಗಳನ್ನು ಕೂಡಾ ಆಧಾರ್ ಜೊತೆ ಜೋಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಪಾನ್,ಬ್ಯಾಂಕ್ ಖಾತೆಗಳು, ಸಿಮ್ ಕಾರ್ಡ್‌ಗಳು ಹಾಗೂ ಸರಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆಯಾದರೂ, ಈ ಬಗ್ಗೆ ಯಾವುದೇ ತಡೆ ಯಾಜ್ಞೆಯನ್ನು ವಿಧಿಸಲಾಗಿಲ್ಲವೆಂದು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಪಾನ್,ಬ್ಯಾಂಕ್ ಖಾತೆಗಳು, ಸಿಮ್ ಕಾರ್ಡ್‌ಗಳು ಆಧಾರ್ ಕಡ್ಡಾಯಗೊಳಿಸಿ ರುವುದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆಯೆಂಬ ಸುಳ್ಳು ಸಂದೇಶವನ್ನು ಹರಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್‌ಅಪ್‌ಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಈ ಸ್ಪಷ್ಟೀಕರಣವನ್ನು ನೀಡಿದೆ.







