ಬೆಂಗಳೂರು; ಭೂ ಪರಿವರ್ತನೆ ಕೋರಿಕೆಗೆ ನಿರಾಕರಣೆ : ಜಿಲ್ಲಾಧಿಕಾರಿಗೆ ಹೈಕೋರ್ಟ್ ಛೀಮಾರಿ
ಬೆಂಗಳೂರು, ಡಿ.7: ಭೂ ಪರಿವರ್ತನೆ ಕೋರಿಕೆ ಅರ್ಜಿ ಮಾನ್ಯ ಮಾಡಿಲ್ಲ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಮತ್ತು ಕಚೇರಿ ಸಹಾಯಕ ನರಸಿಂಹ ಮೂರ್ತಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ನಗರದ ಮಂಗಿಲಾಲ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠವು ಕೆಎಟಿ ಆದೇಶವಿದ್ದರೂ ಏಕೆ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ. ನೀವು ಇಂತಹ ಅರ್ಜಿಗಳ ವಿಲೇವಾರಿಗೆ ಲಕ್ಷಗಟ್ಟಲೆ ಹಣ ಕೇಳುತ್ತೀರಿ ಎಂಬ ದೂರುಗಳು ಬಂದಿವೆ. ಇಂತಹ ಕೆಲಸ ಮಾಡಲು ನಿಮಗೆ ನಾಚಿಕೆಯಾಗೊಲ್ವೇ ಎಂದು ಕಿಡಿಕಾರಿದರು.
ಈ ಮಾತಿಗೆ ತಲೆ ತಗ್ಗಿಸಿ ನಿಂತಿದ್ದ ಪಾಲಯ್ಯ ಅವರನ್ನು ನ್ಯಾಯಮೂರ್ತಿ ಸತ್ಯನಾರಾಯಣ ಅವರು ತಲೆ ಎತ್ತುವಂತೆ ಆದೇಶಿಸಿ, ನೀವು ಡಿ.8ರ ಬೆಳಗ್ಗೆ 10ಗಂಟೆಯೊಳಗೆ ಈ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಅದರಲ್ಲಿ ಏನಾದರೂ ತಪ್ಪೆಂದು ಕಂಡು ಬಂದರೆ ಮುಂದಿನ ಕ್ರಮಕ್ಕೆ ಆದೇಶಿಸುತ್ತೇನೆ ಎಂದು ಬೆವರಿಳಿಸಿದರು.
2 ಲಕ್ಷ ಚಿಲ್ಲರೆ ಸಂಬಳ ತೆಗೆದುಕೊಳ್ಳುವ ನಮಗೆ ತಿಂಗಳ ಕೊನೆಗೆ ಹಣ ಅಡ್ಜಸ್ಟ್ ಮಾಡುವುದೆ ನಮಗೆ ಕಷ್ಟವಾಗುತ್ತದೆ. ಆದರೆ, ನೀವು ಭೂ ಪರಿವರ್ತನೆಯನ್ನು ದಂಧೆ ಮಾಡಿಕೊಂಡು ಕುಳಿತಿದ್ದೀರಿ. ನಿಮ್ಮ ಕಂದಾಯ ಇಲಾಖೆ ಬೋರ್ಡ್ ತೆಗೆದು ಅದಕ್ಕೆ ಭಿಕ್ಷುಕರ ಕಾಲನಿ ಎಂದು ಹೆಸರಿಡಿ. ನಿಮಗೆ ನಾಚಿಕೆ ಆಗೊದಿಲ್ವಾ ಎಂದು ತಿವಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ಅವರು ಮಧ್ಯಪ್ರವೇಶಿಸಿದರು. ಆದರೆ, ಯಾವುದೇ ಸಮಜಾಯಿಷಿಯನ್ನು ಒಪ್ಪದ ನ್ಯಾಯಮೂರ್ತಿಗಳು ಶಿವಣ್ಣ ಅವರೆ ಈ ಮಾತನ್ನು ತಾವು ತಮಾಷೆಗೆ ಹೇಳುತ್ತಿಲ್ಲ. ಇದೇ ಜಿಲ್ಲಾಧಿಕಾರಿ ವಿರುದ್ಧ ಬಂದಿರುವ ದೂರುಗಳ ಬಗ್ಗೆ ತೋರಿಸುತ್ತೇನೆ. ಎಲ್ಲರಿಗೂ ಕೋರ್ಟ್ ಮೆಟ್ಟಿಲು ತುಳಿಯುವ ಶಕ್ತಿ ಇಲ್ಲ. ಅವನ್ನೆಲ್ಲಾ ನೋಡುತ್ತಿದ್ದರೆ ಕಣ್ಣೀರು ಬರುತ್ತದೆ ಎಂದು ಅತೃಪ್ತಿ ಹೊರ ಹಾಕಿದರು. ಪರಿವರ್ತನೆ ಮಾಡದೇ ಇರಲು ಕಾರಣವೇನು ಎಂಬುದರ ಬಗ್ಗೆ ಡಿ.8ರ ಬೆಳಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.
ಪ್ರಕರಣವೇನು: ನಗರದ ಬನ್ನೇರುಘಟ್ಟ ಪ್ರದೇಶದ ನಿವಾಸಿ ಮಂಗಿಲಾಲ್ ಎಂಬುವರು ದೇವನಹಳ್ಳಿ ವ್ಯಾಪ್ತಿಯಲ್ಲಿ 2 ಎಕರೆ 20 ಗುಂಟೆಗೆ ಹೆಚ್ಚಿನ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.
ಅರ್ಜಿದಾರರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿದ್ದ ಜಿಲ್ಲಾಧಿಕಾರಿ ಪರಿವರ್ತನೆಗೆ ನಿರಾಕರಿಸಿದ್ದರು. ಇದನ್ನು ಮಂಗಿಲಾಲ್ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಕೆಎಟಿ ಅರ್ಜದಾರರ ಕೋರಿಕೆ ಸರಿಯಾಗಿದೆ. ಅವರ ಜಮೀನನ್ನು ಪರಿವರ್ತಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದರು. ಆದರೆ, ಜಿಲ್ಲಾಧಿಕಾರಿ ಈ ಆದೇಶ ಪಾಲನೆ ಮಾಡಿರಲಿಲ್ಲ. ಇದನ್ನು ಮಂಗಿಲಾಲ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.







