ಲಾಕೌಟ್ ತೆರವುಗೊಳಿಸಿದ ಸುಜ್ಲಾನ್: ಕಾರ್ಮಿಕರು ಮತ್ತೆ ಸೇರ್ಪಡೆ

ಪಡುಬಿದ್ರೆ, ಡಿ. 7: ಕಳೆದ ತಿಂಗಳು ಲಾಕೌಟ್ ಘೋಷಣೆ ಮಾಡಿರುವ ಪಡುಬಿದ್ರೆಯಲ್ಲಿ ಕಾರ್ಯಾಚರಿಸುತಿದ್ದ ಸುಜ್ಲಾನ್ ಕಂಪೆನಿಯು ಗುರುವಾರದಿಂದ ಘಟಕವು ಅಧಿಕೃತವಾಗಿ ತೆರವುಗೊಳಿಸಿದೆ.
ಪವನ ವಿದ್ಯುತ್ ಉತ್ಪಾದನೆಯ ಬಿಡಿಭಾಗ ತಯಾರಿಕಾ ಘಟಕ ಸುಜ್ಲಾನ್ ಕಂಪೆನಿಯು ನವೆಂಬರ್ 29ರಿಂದ ಲಾಕೌಟ್ ಮಾಡುವುದಾಗಿ 14ರಂದು ಘೋಷಣೆ ಮಾಡಿ 330 ಕಾರ್ಮಿಕರನ್ನು ವಜಾಗೊಳಿಸಿತ್ತು. ಆ ಬಳಿಕ ಕಾರ್ಮಿಕರು ಕಂಪೆನಿಯ ಎದುರು ಪ್ರತಿಭಟನೆ ನಡೆಸಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಶಾಸಕರು, ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಇಂಟಕ್ ಸಹಿತ ವಿವಿಧ ಸಂಘಟನೆಗಳು ಘಟಕ ಪುನರಾರಂಭಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಆಡಳಿತ ಮಂಡಳಿಯು ಉಪಾಧ್ಯಕ್ಷ ವಿಜಯ್ ಅಸ್ನಾನಿಯವರನ್ನು ಸಮಸ್ಯೆ ಪರಿಹಾರಕ್ಕೆ ಕಳುಹಿಸಿದ್ದರು. ಮೂರು ಬಾರಿ ಘಟಕಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಅವರು ಕೊನೆಗೂ ಘಟಕ ಪುನರಾರಂಭಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.
ಗುರುವಾರ ಕಂಪನಿಯ ಉಪಾಧ್ಯಕ್ಷ ವಿಜಯ್ ಅಸ್ನಾನಿ ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರಿಗೆ ಒಪ್ಪಂದದ ಪತ್ರವನ್ನು ಹಸ್ತಾಂತರಿಸುವ ಮೂಲಕ ಕಂಪನಿ ಪುನರಾರಂಭಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಘಟಕವು ಡಿಸೆಂಬರ್ 1ರಿಂದಲೇ ಮುಚ್ಚುಗಡೆ ತೆರವುಗೊಂಡಿದ್ದು, ಕಾರ್ಮಿಕರಿಗೆ ಅಂದಿನಿಂದಲೇ ವೇತನ ಪಾವತಿಯಾಗಲಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ವಾರದೊಳಗೆ ಉತ್ಪಾದನೆ ಪುನರಾರಂಭಿಸಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.
ಘಟಕದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 269 ಕಾರ್ಮಿಕರಿದ್ದು, ಅವರೆಲ್ಲಾ ಗುರುವಾರವೇ ಆಗಮಿಸಿ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಉಳಿದ 61 ಕಾರ್ಮಿಕರು ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ಮೂಲದವರಾಗಿದ್ದು, ಅವರಗೆ ಒಂದು ವಾರದ ಕಾಲಾವಕಾಶ ನೀಡಲು ಕಂಪನಿ ಆಡಳಿತ ಮಂಡಳಿ ಒಪ್ಪಿದೆ.
ಸುಜ್ಲಾನ್ ಪಡುಬಿದ್ರಿ ಘಟಕದಲ್ಲಿರುವ ಟರ್ಬೈನ್ ಘಟಕದ 38 ಕಾರ್ಮಿಕರನ್ನು ಎರಡು ತಿಂಗಳ ಹಿಂದೆ ಗುಜರಾತ್ ಮತ್ತು ರಾಜಸ್ಥಾನಗಳಿಗೆ ವರ್ಗಾವಣೆ ಗೊಳಿಸಲಾಗಿತ್ತು. ಈ ಕಾರ್ಮಿಕರಲ್ಲಿ ಸುಜ್ಲಾನ್‌ಗೆ ಜಾಗ ನೀಡಿದವರೂ ಸೇರಿದ್ದಾರೆ. ಕಡಿಮೆ ಸಂಬಳದಿಂದ ಹೊರರಾಜ್ಯದಲ್ಲಿ ದುಡಿಯಲು ಅಸಾಧ್ಯವೆಂದು ಅವರು ಯಾರೂ ಗುಜರಾತ್, ರಾಜಸ್ಥಾನಕ್ಕೆ ಹೋಗಿರಲಿಲ್ಲ. ತಮ್ಮನ್ನು ಇಲ್ಲೇ ಮುಂದುವರಿಸುವಂತೆ ಅವರು ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತಾ ಬಂದಿದ್ದರು. ಆದರೆ ಆಡಳಿತ ಮಂಡಳಿ ಇದಕ್ಕೆ ಒಪ್ಪಿರಲಿಲ್ಲ. ಗುರುವಾರ ಶಾಸಕ ವಿನಯಕುಮಾರ್ ಸೊರಕೆಯವರು ವಿಜಯ ಅಸ್ನಾನಿ ಜತೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ್ದಾರೆ.
38 ಕಾರ್ಮಿಕರು ಬೇರೆಡೆ ತೆರಳಲು ಸಿದ್ಧರಿಲ್ಲದ ಕಾರಣ ಅವರಿಗೆ ಶಾಶ್ವತ ಪರಿಹಾರ ನೀಡಲು ಕಂಪನಿ ಒಪ್ಪಿಕೊಂಡಿದೆ. ಅದರಂತೆ ಪ್ರತಿಯೊಬ್ಬರಿಗೂ ತಲಾ 3 ಲಕ್ಷ ರೂ.ನಂತೆ ಪರಿಹಾರದೊಂದಿಗೆ ಒಟ್ಟು 5 ಲಕ್ಷ ರೂ.ಪರಿಹಾರ ನೀಡಲು ವಿಜಯ್ ಅಸನಾನಿ ಒಪ್ಪಿದ್ದಾರೆ.
ಭಿನ್ನಮತ ಪರಿಹಾರಕ್ಕೆ ಯತ್ನ: ಘಟಕದಲ್ಲಿ ಕಾರ್ಮಿಕರು ಎರಡು ಸಂಘಟನೆಗಳನ್ನು ರಚಿಸಿಕೊಂಡ ಬಳಿಕವೇ ಉತ್ಪಾದನೆ ವ್ಯತ್ಯಯವಾಯಿತು ಎಂಬುದ ಕಂಪನಿಯ ಮುಖ್ಯ ಆರೋಪ. ಗುರುವಾರದವರೆಗೂ ಎರಡೂ ಸಂಘಟನೆಗಳು ಪ್ರತ್ಯೇಕವಾಗಿಯೇ ಕಾಣಿಸಿಕೊಂಡಿತ್ತು. ಆದರೆ ಇಂಟೆಕ್ ದಕ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಯವರು ಎರಡೂ ಸಂಘಟನೆಗಳ ಪ್ರಮುಖರನ್ನು ಮಾತನಾಡಿಸಿ ಮುಂದೆ ಎಲ್ಲರೂ ಒಗ್ಗಟ್ಟಾಗಿರುವಂತೆ ಸೂಚನೆ ನೀಡಿದ್ದು, ಹತ್ತು ದಿನದೊಳಗೆ ಎರಡೂ ಕಡೆಯವರನ್ನು ಕರೆದು ಇಂಟಕ್ ಪ್ರಮುಖರ ಜತೆ ಸಮಾಲೋಚನೆ ನಡೆಸಿ ರಾಜಿ ಸೂತ್ರ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ಕಾಪು ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಪಿಕೆ, ಅಬೂಬಕ್ಕರ್, ಡಿಆರ್ ನಾರಾಯಣ, ಸ್ಟೀಫನ್ ಡಿಸೋಜಾ, ಸತೀಶ್ ಪೂಜಾರಿ, ಸುಜ್ಲಾನ್ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಅನಾದಿ ಸಾಥಿ, ಅಮರ್ ಸಿಂಗ್, ಆಂಟನಿ ಫಿಲಿಪ್, ದಕ್ಷಿಣಾಮೂರ್ತಿ, ಕಾರ್ಮಿಕ ಮುಖಂಡ ಸುಧೀರ್ ವಿ.ಸಾಲ್ಯಾನ್ ಮತ್ತಿತರರು ಜತೆಗಿದ್ದರು.







