ನಿವೇಶನ ಹಕ್ಕುಪತ್ರಕ್ಕಾಗಿ ಶ್ರಮಿಕ ನಿವಾಸಿಗಳ ನಗರ ಪ್ರತಿಭಟನೆ

ಮಂಡ್ಯ, ಡಿ.7: ನಿವೇಶನದ ಹಕ್ಕು ನೀಡಿ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ, ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
94 ಸಿ ಮತ್ತು 94ಸಿಸಿ ಕೆಳಗೆ ಒಂದು ವರ್ಷದ ಹಿಂದೆ ಸಲ್ಲಿಸಲಾದ ಬಡಜನರ ಮನವಿಗಳನ್ನು ಕೂಡಲೇ ಪರಿಗಣಿಸಿ ನಿವೇಶನದ ಹಕ್ಕನ್ನು ನೀಡಬೇಕು. ಸರಕಾರದ ನಿರ್ದೇಶನದಂತೆ ಮಂಡ್ಯದಲ್ಲಿ ಸ್ವಂತ ವಸತಿ ಇಲ್ಲದವರ ಸಮಸ್ಯೆಗಳನ್ನು ಕೂಡಲೇ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.
ನೆನಗುದಿಗೆ ಬೀಳುತ್ತಿರುವ ವಿವಿಧ ಶ್ರಮಿಕ ನಗರಗಳ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕು. ಇತ್ತೀಚಿಗೆ ರಾಷ್ಟ್ರಪತಿ ಅವರ ಅಂಕಿತ ಪಡೆದಿರುವ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡಜನರಿಗೆ ನಿವೇಶನ ಮತ್ತು ವಸತಿ ಹಕ್ಕನ್ನು ನೀಡುವ ಕಾಯ್ದೆಗೆ ರಾಜ್ಯ ಸರಕಾರ ನಿಯಮಾವಳಿಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನಗರದ ಸ್ಲಂಗಳಲ್ಲಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ 15 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಅಧಿಕಾರಿಗಳ ವರ್ಗಾವಣೆಯೊಂದಿಗೆ ಕೆಲಸಗಳು ನೆನಗುದಿಗೆ ಬೀಳುತ್ತಿವೆ ಎಂದು ಅವರು ಕಿಡಿಕಾರಿದರು.
ನ್ಯೂ ತಮಿಳು ಕಾಲನಿ, ಆರ್‍ಟಿಓ ಕಾಳಪ್ಪ ಬಡಾವಣೆ ಮೊದಲಾದ ಕಡೆ ಭೂಮಿಯನ್ನು ವಾಸಿಸುವವರಿಗೆ ವರ್ಗಾಯಿಸುವ ಮತ್ತು ವಸತಿ ಯೋಜನೆ ಕೆಲಸ ಆಗಬೇಕು. ನಂದಾ ಥಿಯೇಟರ್ ಹಿಂಭಾಗದ ಇಂದಿರಾ ಬಡಾವಣೆ, ಗಿರಿಜಾ ಬಡಾವಣೆ, ಸ್ಲಾಟರ್ ಹೌಸ್, ಗುರುಮಠ ವಿಚಾರದಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ತಾಕೀತು ಮಾಡಿದರು.
ಕಾಳಿಕಾಂಭ ಬಡಾವಣೆಯ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಕಾಳಿಕಾಂಭ ದೇವಾಲಯ ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಬೇಕು. ವಿಳಂಬ ಮಾಡದೆ `ರೇ' ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಹಾಲಹಳ್ಳಿ ಪ್ರದೇಶದಲ್ಲಿ ಮೊದಲು ಸ್ಲಂ ಬೋರ್ಡ್ ಅಧಿಕಾರಿಗಳು ವಾಗ್ದಾನ ನೀಡಿದಂತೆ ಗುಣಮಟ್ಟದ ಮನೆ ನಿರ್ಮಾಣದಲ್ಲಿ ರಾಜಿಯಾಗದೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು.
ಶ್ರೀರಂಗಪಟ್ಟಣದ ಮೊಗರಳ್ಳಿ ಮಂಟಿಯಿಂದ ಎತ್ತಂಗಡಿ ಮಾಡಲಾದ ಹಕ್ಕಿಪಿಕ್ಕಿ ಅಲೆಮಾರಿ ಆದಿವಾಸಿ ಸಮುದಾಯದ ಜನರಿಗೆ ಮಹದೇವಪುರದ ಚನ್ನೇನಹಳ್ಳಿ ಬಳಿ ವಾಸಿಸುತ್ತಿದ್ದು, ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಅವರುಯಿಸಿದರು.
ಮಂಡ್ಯದ ಎಲ್ಲ ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿ ಮತ್ತು ಸ್ಥಳೀಯ ನಿವಾಸಿಗಳ, ಸಂಘಸಂಸ್ಥೆಗಳ ಮುಖಂಡರ ಸಮಿತಿ ರಚಿಸಿ ಅಭಿವೃದ್ಧಿ ಯೋಜನೆಯ ನೀಲನಕ್ಷೆ ರೂಪಿಸಬೇಕು. ಮದ್ದೂರಿನ ಸ್ಲಂ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎಸ್.ಪ್ರಕಾಶ್, ಕರ್ನಾಟಕ ಜನಶಕ್ತಿ ಸಂಘಟನೆಯ ಎಂ.ಸಿದ್ದರಾಜು, ಎನ್.ನಾಗೇಶ್, ಚಂದ್ರಶೇಖರ್, ಸೋಮಣ್ಣ, ಶಂಕರ್, ನಂಜಪ್ಪ, ಸಿದ್ದು, ಚನ್ನಪ್ಪ, ವಿಜಯ, ಎನ್.ಕುಸುಮ, ಸರೋಜಮ್ಮ, ಅಂಕಮ್ಮ, ಪ್ರೇಮ, ಜ್ಯೋತಿ, ಗೌರಮ್ಮ, ಚಿಕ್ಕೋಳಮ್ಮ, ಲತಾ, ಶಾಂತಿ, ಶಾಹನಾಜ್‍ಬೇಗಂ, ನಸೀಮಾ, ಸುಧಾನ, ಫಾತೀಮಾ, ಲೀಲಾವತಿ, ವಿಜಯ, ಸಿದ್ದು, ಇತರರು ಪಾಲ್ಗೊಂಡಿದ್ದರು.







