ನಗರಸಭೆ ಅಧ್ಯಕ್ಷರಿಗೆ ಲೋಕಾಯುಕ್ತರ ಛೀಮಾರಿ: ಆಡಳಿತ ಮಂಡಳಿಯ ವಿಸರ್ಜನೆಗೆ ವಿಪಕ್ಷ ಆಗ್ರಹ
ಪುತ್ತೂರು, ಡಿ. 7: ನಗರಸಭೆಯ ಪೌರಾಯುಕ್ತರ ವಿರುದ್ಧ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತರಿಂದ ಛೀಮಾರಿ ಹಾಕಿಸಿಕೊಂಡಿರುವ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ತಕ್ಷಣವೇ ಅಧ್ಯಕ್ಷರು ರಾಜೀನಾಮೆ ನೀಡಿ ಪುತ್ತೂರು ನಗರಸಭೆಯನ್ನು ವಿಸರ್ಜಿಸಬೇಕು ಎಂದು ಪುತ್ತೂರು ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ ಮತ್ತು ಹಿರಿಯ ವಿಪಕ್ಷ ಸದಸ್ಯ ರಾಜೇಶ್ ಬನ್ನೂರು ಆಗ್ರಹಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲೋಕಾಯುಕ್ತ ನ್ಯಾಯಮೂರ್ತಿಯವರು ಅಧ್ಯಕ್ಷರಿಗೆ ಅಧಿಕಾರ ನಿಭಾಯಿಸಲು ಆಗುವುದಿಲ್ಲವಾದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಸೂಚಿಸಿದ್ದಾರೆ. ಅಧ್ಯಕ್ಷರಿಗೆ ನಿಭಾಯಿಸುವ ಶಕ್ತಿಯಿಲ್ಲ ಎಂಬುದು ನಮಗೆ ಈ ಹಿಂದೆಯೇ ಮನವರಿಕೆಯಾಗಿದ್ದು, ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಆಡಳಿತ ಮಂಡಳಿ ವಿಸರ್ಜನೆ ಮಾಡುವಂತೆ ವಿನಂತಿಸಿದ್ದೆವು. ಜಿಲ್ಲಾಧಿಕಾರಿಗಳಿಗೆ ನೀಡಿದ ದೂರು ಉಪ ವಿಭಾಗಾಧಿಕಾರಿಗಳ ಹಂತಕ್ಕೆ ಹೋಗಿದ್ದರೂ ರಾಜಕೀಯ ಪ್ರಭಾವದ ಕಾರಣದಿಂದ ಫಲ ಸಿಕ್ಕಿಲ್ಲ. ವಿಸರ್ಜನೆ ಮಾಡಲು ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದರು. ಈಗ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿಗಳೇ ಅಧ್ಯಕ್ಷರಿಗೆ ಛೀಮಾರಿ ಹಾಕಿದ್ದಾರೆ. ಇನ್ನು ಮುಂದೆ ಈ ಅಡಳಿತ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಹೊಂದಿಲ್ಲ ಎಂದದರು.
ಲೋಕಾಯುಕ್ತ ನ್ಯಾಯಮೂರ್ತಿಗಳು ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎನ್ನುವ ಅಧ್ಯಕ್ಷರು ನಗರಸಭೆಯಲ್ಲಿ ಎಲ್ಲವೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ಬಹುಮತದ ನಿರ್ಣಯಕ್ಕೆ ಬೆಲೆ ನೀಡುತ್ತಿಲ್ಲ. ಬೇರೆಯೇ ನಿರ್ಣಯ ಕೈಗೊಳ್ಳಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ಕರೆದಿಲ್ಲ. ಸ್ಥಾಯಿ ಸಮಿತಿ ರಚನೆ ಮಾಡದೆ ಒಂದು ವರ್ಷ ಕಳೆಯಿತು. ನಗರಸಭೆ ಕಚೇರಿಯ ಮಹಿಳಾ ಶೌಚಾಲಯವನ್ನು ದುರಸ್ತಿ ಮಾಡಿದ ಓರ್ವ ಮಹಿಳಾ ಪೌರಾಯುಕ್ತರ ವಿರುದ್ದವೇ ಮಹಿಳೆಯಾಗಿರುವ ಅಧ್ಯಕ್ಷರು ದೂರು ನೀಡಿರುವುದು ಇವರ ದಬ್ಬಾಳಿಕೆಗೆ ಮತ್ತು ಮಹಿಳಾ ವಿರೋಧಿ ನಡೆಗೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಛೀಮಾರಿ ಹಾಕಿಸಿಕೊಂಡಿರುವ ಅಧ್ಯಕ್ಷರ ಬಗ್ಗೆ ನಮಗೆ ಅನುಕಂಪವಿದೆ. ಇದರಲ್ಲಿ ಅಧ್ಯಕ್ಷೆ ನಿರಪರಾಧಿಯಾಗಿದ್ದಾರೆ. ಅವರ ಹಿಂಬಾಲಕ ಅವರನ್ನು ದಾರಿತಪ್ಪಿಸುತ್ತಿದ್ದಾರೆ. ಪೌರಾಯುಕ್ತರ ವಿರುದ್ಧ ಅಧ್ಯಕ್ಷರು ನೀಡಿದ ದೂರನ್ನು ವಜಾ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷರು ಇದನ್ನು ಏಕಪಕ್ಷೀಯ ಕ್ರಮ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುವುದಾಗಿಯೂ ಅವರು ತಿಳಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡ ಪ್ರಕರಣವನ್ನು ಉಚ್ಚ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತದಾ ಎಂಬ ಜ್ಞಾನವೂ ಅಧ್ಯಕ್ಷರಿಗೆ ಇಲ್ಲ. ಇನ್ನಾದರೂ ಅಧ್ಯಕ್ಷರು ಪರಿಸ್ಥಿತಿ ಅರ್ಥ ಮಾಡಿಕೊಂಡು ನಗರಸಭೆ ಆಡಳಿತ ವಿಸರ್ಜನೆಯ ನಮ್ಮ ಬೇಡಿಕೆಗೆ ಕೈಜೋಡಿಸಲಿ. ಈ ಬೆಳವಣಿಗೆಯಿಂದ ಆಡಳಿತ ಕಾಂಗ್ರೆಸ್ ಮಾತ್ರವಲ್ಲದೆ ಪುತ್ತೂರಿನ ಜನತೆ ತಲೆ ತಗ್ಗಿಸುವಂತಾಗಿದೆ. ಇಂತಹ ಸ್ಥಿತಿ ಮುಂದುವರಿಯುವುದು ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.







