ಹಂತಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ದುಃಖತಪ್ತ ಕುಟುಂಬದ ಆಗ್ರಹ
ಲವ್ ಜಿಹಾದ್ ಆರೋಪದಲ್ಲಿ ವ್ಯಕ್ತಿಯ ಸಜೀವ ದಹನ

ಹೊಸದಿಲ್ಲಿ, ಡಿ.7:ರಾಜಸ್ಥಾನದಲ್ಲಿ ಬರ್ಬರವಾಗಿ ಹತ್ಯೆಗೀಡಾದ 50 ವರ್ಷ ವಯಸ್ಸಿನ ಅಫ್ರಾಝುಲ್ ಇಸ್ಲಾಂ ಹುಟ್ಟೂರಾದ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಸೈದಾಪುರ ಗ್ರಾಮದಲ್ಲಿ ಈಗ ದುಃಖ ಮಡುಗಟ್ಟಿದೆ. ಅಫ್ರಾಝುಲ್ ಇಸ್ಲಾಂ ಹಂತಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಆತನ ಶೋಕತಪ್ತ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
‘‘ನನ್ನ ಮಗ ಕೊಲೆಯಾಗುವ ಮುನ್ನ, ಬೆಳಗ್ಗಿನ ಹೊತ್ತು ಆತನೊಂದಿಗೆ ಮಾತನಾಡಿದ್ದೆ. ಕೊಲೆಗೆ ಕಾರಣ ನನಗೆ ತಿಳಿದಿಲ್ಲ. ಆತನನ್ನು ಹತ್ಯೆಗೈಯುವುದನ್ನು ತೋರಿಸುವ ವಿಡಿಯೋವನ್ನು ನಾನು ನೋಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು’’ ಎಂದು ಅಫ್ರಾಝುಲ್ ಇಸ್ಲಾಂ ಶೋಕತಪ್ತ ತಾಯಿ ಹೇಳಿದ್ದಾರೆ.
ತನ್ನ ಪತಿಗೆ ಉದ್ಯೋಗ ಕೊಡಿಸುವ ಅಮಿಷವೊಡ್ಡಿ, ಕೊಲೆ ನಡೆಸಿದ ಸ್ಥಳಕ್ಕೆ ಹಂತಕನು ಕರೆತಂದಿದ್ದನೆಂದು ಮೃತನ ಪತ್ನಿ ಗುಲ್ ಬಹಾರ್ ಬಾಯಿ ಆರೋಪಿಸಿದ್ದಾರೆ.
ಮುಹಮ್ಮದ್ ಭಟ್ಟಾಶೇಖ್‌ನ ಪುತ್ರಿಯ ವಿವಾಹ ಮುಂದಿನ ಎರಡು ತಿಂಗಳುಗಳೊಳಗೆ ನಡೆಯಲಿತ್ತು. ಈ ಕುಟುಂಬದ ಏಕೈಕ ಜೀವನಾಧಾರವಾಗಿದ್ದ ಆತನ ಸಾವಿನಿಂದ ಇಡೀ ಕುಟುಂಬಕ್ಕೆ ಬರಸಿಡಿಲೆರಗಿದಂತಾಗಿದೆ.
ನನ್ನ ಪತಿ ಕೊಲೆಯಾದ ಸುದ್ದಿ ನಮಗೆ ಬುಧವಾರ ತಿಳಿಯಿತು. ಆತನಿಗೆ ಯಾವುದೇ ಪ್ರೇಮ ವ್ಯವಹಾರವಿರಲಿಲ್ಲವೆಂದು ನನಗೆ ಖಾತರಿಯಿದೆ. ಹಂತಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ನಾನು ಬಯಸುತ್ತೇನೆ. ನನ್ನ ಮಗಳ ಮದುವೆಗೆ ಹಣವನ್ನು ಹೇಗೆ ಹೊಂದಿಸುವುದು ಹೇಗೆಂಬುದು ಈಗ ತನಗೆ ತಿಳಿಯುತ್ತಿಲ್ಲವೆಂದು ನೊಂದು ಹೇಳಿದ್ದಾರೆ.







