‘ಯುವ ಬ್ರಿಗೇಡ್’ ರಚನೆಗೆ ರಾಹುಲ್ ಗಾಂಧಿ ಸಿದ್ಧತೆ?

ಬೆಂಗಳೂರು, ಡಿ.7: ದೇಶಾದ್ಯಂತ ಎಲ್ಲ ರಾಜ್ಯಗಳ ರಾಜಕಾರಣದಲ್ಲಿ ಸಕ್ರಿಯವಾಗಿರುವ ಯುವಕರನ್ನು ಒಳಗೊಂಡ ‘ಯುವ ಬ್ರಿಗೇಡ್’ ತಂಡವನ್ನು ರಚಿಸಲು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಸಿದ್ಧತೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಆಯ್ಕೆಯಾದ ತಕ್ಷಣ ಯುವ ಬ್ರಿಗೇಡ್ ರಚನೆಗೆ ವೇಗ ಸಿಗಲಿದೆ. ಈ ಯುವ ಬ್ರಿಗೇಡ್‌ಗೆ ತಮ್ಮ ಕೋರ್ ಕಮಿಟಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲು ರಾಹುಲ್‌ಗಾಂಧಿ ಉದ್ದೇಶಿಸಿದ್ದಾರೆ.
ಬಹುತೇಕ ಎಲ್ಲ ರಾಜ್ಯಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ, ಚಾಣಾಕ್ಷ ಯುವ ನಾಯಕರ ಜತೆ ಒಂದು ಹಂತದ ಚರ್ಚೆಯನ್ನು ರಾಹುಲ್‌ಗಾಂಧಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಮಾಜಿ ಸಂಸದೆ ರಮ್ಯಾ ಹಾಗೂ ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್ ಕಾರ್ಯವೈಖರಿಗೆ ರಾಹುಲ್‌ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತಮ್ಮ ಪ್ರಬುದ್ಧತೆಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸಚಿವರಿಂದಲೆ ಮೆಚ್ಚುಗೆಗಳಿಸಿರುವ ಕೃಷಿ ಸಚಿವ ಕೃಷ್ಣಭೈರೇಗೌಡ ಮೇಲೆ ರಾಹುಲ್‌ಗಾಂಧಿಗೆ ಹೆಚ್ಚಿನ ವಿಶ್ವಾಸವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವ ಮತದಾರರನ್ನು ಪಕ್ಷದತ್ತ ಸೆಳೆಯಲು ಈ ಯುವ ಬ್ರಿಗೇಡ್ ಸಕ್ರಿಯವಾಗುವ ಸಾಧ್ಯತೆಗಳು ಹೆಚ್ಚಿವೆ.





