ಮಂಡ್ಯ : ದೇವಾಲಯದಲ್ಲಿ ದಲಿತರಿಂದ ಪೂಜೆ

ಮಂಡ್ಯ, ಡಿ.7: ಮುಜರಾಯಿ ಇಲಾಖೆಗೆ ಸೇರಿದ ಪಾಂಡವಪುರ ತಾಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಎಂ.ಬೆಟ್ಟಹಳ್ಳಿ ಗ್ರಾಮದ ದಲಿತರು ಗುರುವಾರ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಶ್ರೀ ಶಂಭುಲಿಂಗೇಶ್ವರ ಸ್ವಾಮಿಯ ಬಂಡಿ ಉತ್ಸವದ ಬಂಡಿ ಕಟ್ಟುವ ವಿಚಾರದಲ್ಲಿ ಜಗಳವಾಗಿ ಕಳೆದ 20 ವರ್ಷಗಳಿಂದ ಗ್ರಾಮದಲ್ಲಿ ಬಂಡಿ ಉತ್ಸವ ಹಾಗೂ ಲಕ್ಷದೀಪೋತ್ಸವ ನಿಂತುಹೋಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಸೌಹಾರ್ದಯುತವಾಗಿ ಬಂಡಿ ಉತ್ಸವ ಆಚರಣೆ ಮಾಡಿದ್ದರು. ಈತ್ತೀಚೆಗೆ ಕಾರ್ತಿಕ ಮಾಸದಲ್ಲಿ ಎರಡೂ ಪಂಗಡದ ಮುಖಂಡರು ತಾಲೂಕು ಆಡಳಿತದ ನೇತೃತ್ವದಲ್ಲಿ ಸಭೆ ಸೇರಿ ಯಾವುದೇ ವೈಮನಸ್ಸು ಇಲ್ಲದೆ ಲಕ್ಷದೀಪೋತ್ಸವ ನಡೆಸಿದ್ದರು.
ಆದರೆ, ಕೆಲವು ದಲಿತ ಯುವಕರು ಶಂಭುಲಿಂಗೇಶ್ವರ ದೇವಾಲಯದಲ್ಲಿ ದಲಿತರನ್ನು ಸೇರಿಸುತ್ತಿಲ್ಲ ಎಂದು ತಾಲೂಕು ಆಡಳಿತಕ್ಕೆ ದೂರು ನೀಡಿದ ಪರಿಣಾಮ ಗುರುವಾರ ಶ್ರೀರಂಗಪಟ್ಟಣ ಡಿವೈಎಸ್‍ಪಿ ವಿಶ್ವನಾಥ್ ನೇತೃತ್ವದಲ್ಲಿ ಎಂ.ಬೆಟ್ಟಹಳ್ಳಿ ಗ್ರಾಮದ ಕೆಲವು ದಲಿತ ಯುವಕರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಪಿಎಸ್‍ಐ ಪುನೀತ್, ದಲಿತ ಮುಖಂಡರಾದ ಗ್ರಾಪಂ ಸದಸ್ಯ ಲೋಹಿತ್, ದೇವರಾಜು, ರವಿ, ಶಿವಕುಮಾರ್, ರತ್ನಮ್ಮ, ಮಂಜು, ಪ್ರಸನ್ನ, ಇತರರು ಹಾಜರಿದ್ದರು.







