ಮಣೀಂದರ್ ಸಿಂಗ್ ಪಂಧೇರ್, ಸುರಿಂದರ್ ಕೋಲಿ ಅಪರಾಧ ಸಾಬೀತು
ನಿಥಾರಿ ಅತ್ಯಾಚಾರ, ಕೊಲೆ ಪ್ರಕರಣ

ಹೊಸದಿಲ್ಲಿ, ಡಿ.7: ಅಂಜಲಿ ಎಂಬ ಗೃಹಿಣಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಉದ್ಯಮಿ ಮಣೀಂದರ್ ಸಿಂಗ್ ಪಂಧೇರ್ ಮತ್ತು ಆತನ ಸಹಚರ ಸುರೀಂದರ್ ಕೋಲಿ ಅಪರಾಧಿಗಳು ಎಂದು ಗಾಝಿಯಾಬಾದ್‌ನ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ನಿಥಾರಿ ಸರಣಿ ಕೊಲೆ ಪ್ರಕರಣದಲ್ಲಿ 9ನೆಯ ಪ್ರಕರಣ ಇದಾಗಿದ್ದು, ಇದರಲ್ಲಿ ಶಿಕ್ಷೆಯ ಪ್ರಮಾಣವನ್ನು ಡಿ.8ರಂದು ಪ್ರಕಟಿಸಲಾಗುವುದು ಎಂದು ವಿಶೇಷ ಸಿಬಿಐ ತನಿಖಾ ನ್ಯಾಯಾಧೀಶ ಪಿ.ಕೆ.ತಿವಾರಿ ಹೇಳಿದ್ದಾರೆ. ಇದುವರೆಗಿನ ಎಂಟೂ ಪ್ರಕರಣಗಳಲ್ಲಿ ಸುರೀಂದರ್ ಕೋಲಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದರೆ, ಮಣೀಂದರ್ ಸಿಂಗ್ ಪಂಧೇರ್‌ಗೆ ಎರಡು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಒಟ್ಟು 19 ಪ್ರಕರಣಗಳಲ್ಲಿ 16 ಪ್ರಕರಣಗಳಲ್ಲಿ ಈ ಇಬ್ಬರ ವಿರುದ್ಧ ಆರೋಪಪಟ್ಟಿ ದಾಖಲಾಗಿದ್ದು, 9ರಲ್ಲಿ ತೀರ್ಪು ಹೊರಬಿದ್ದಿದೆ. 2006ರ ಡಿ.29ರಂದು ಪಂಧೇರ್‌ನ ಮನೆ ಬಳಿ 16 ವ್ಯಕ್ತಿಗಳ ತಲೆಬುರುಡೆ ಮತ್ತು ಮೂಳೆಗಳನ್ನು ಪತ್ತೆಹಚ್ಚಿದ್ದ ಪೊಲೀಸರು ಪಂಧೇರ್‌ನನ್ನು ಬಂಧಿಸುವುದರೊಂದಿಗೆ ಈ ಸರಣಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು.





