ರಸ್ತೆ ದುರಸ್ತಿಗೆ ಆಗ್ರಹ : ಭಾಗಮಂಡಲದಿಂದ ಮಡಿಕೇರಿಗೆ ಪ್ರತಿಭಟನಾ ಜಾಥಾ

ಮಡಿಕೇರಿ,ಡಿ.7 :ಕರಿಕೆ, ಭಾಗಮಂಡಲ ಮತ್ತು ಮಡಿಕೇರಿ ನಡುವಣ ರಸ್ತೆಯನ್ನು ದುರಸ್ತಿ ಪಡಿಸದೆ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಡಿಸೆಂಬರ್ 12 ರಂದು ಬಿಜೆಪಿ ವತಿಯಿಂದ ಭಾಗಮಂಡಲದಿಂದ ಮಡಿಕೇರಿಯವರೆಗೆ ಪ್ರತಿಭಟನಾ ಜಾಥಾ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರುಗಳ ನೇತೃತ್ವದಲ್ಲಿ ಡಿ.12 ರಂದು ಬೆಳಗ್ಗೆ 7 ಗಂಟೆಗೆ ಭಾಗಮಂಡಲದಿಂದ ಜಾಥಾ ಆರಂಭಗೊಳ್ಳಲಿದೆ. ಜಾಥಾ ತೆರಳುವ ಚೆಟ್ಟಿಮಾನಿ, ಚೇರಂಬಾಣೆ ಮೊದಲಾದೆಡೆಗಳಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಸಭೆಗಳು ನಡೆಯಲಿವೆ ಎಂದರು.
ಮಡಿಕೇರಿಗೆ ಆಗಮಿಸಿದ ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಮಾಹಿತಿ ನೀಡಿದರು.
ಕಾಂಗ್ರೆಸ್ ಸರಕಾರ ವಿಫಲ
ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಸರ್ಕಾರಿ ಕಛೇರಿಗಳು ಭ್ರಷ್ಟಾಚಾರದ ಕೂಪವಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ರಸ್ತೆಗಳ ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನೂ ಕೂಡ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ತನ್ನೆದುರು ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯನ್ನು ಸೂಚಿಸುತ್ತಿದೆಯೆಂದು ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದರು.
ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಕರಿಕೆ, ಭಾಗಮಂಡಲ-ಮಡಿಕೇರಿ ರಸ್ತೆ ದುರಸ್ತಿಗೆ 3 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಕಳೆದ ನಾಲ್ಕೂವರೆಗೆ ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ವರ್ಷಕ್ಕೆ 50 ಕೋಟಿಯಂತೆ 200 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಆದರೆ, ಇದರಲ್ಲಿ ಬಂದಿರುವುದು ಕೇವಲ 40 ಕೋಟಿ ಮಾತ್ರವೆಂದು ಲೇವಡಿ ಮಾಡಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಲ್ಲೆಗೆ 1800 ಕೋಟಿಗೂ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆಯೆಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಏನನ್ನೂ ಮಾಡದೆ, ಇದೀಗ ಕಾಂಗ್ರೆಸ್ ನಾಯಕರು ಭೂಮಿ ಪೂಜೆಯ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಕರಿಮೆಣಸು ಆಮದನ್ನು ನಿಯಂತ್ರಿಸಲು ಆಮದಾಗುವ ಪ್ರತಿ ಕೆ.ಜಿ. ಕರಿಮೆಣಸಿಗೆ 500 ರೂ. ಮತ್ತು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಮೂಲಕ ಬೆಳೆಗಾರರ ರಕ್ಷಣೆಗೆ ಬಂದಿದ್ದು, ಇದನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಡಿಕೇರಿ ತಾಲ್ಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೋಡಿ ಪ್ರಸನ್ನ, ಹಾಗೂ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.







