ನೀರಿಗೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಡಿ.7: ಹವಾಮಾನ ವೈಪರಿತ್ಯದ ಕಾರಣ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟಿನಲ್ಲಿ ಉಳಿದುಕೊಂಡಿದ್ದ ಗೋಪಾಲ (52) ಎಂಬವರ ಮೃತ ದೇಹ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಟೆಬ್ಮಾ ಬಳಿ ಇರುವ ಬೋಟು ನಿಲ್ಲುವ ಸ್ಥಳದಲ್ಲಿ ನೀರಿನಲ್ಲಿ ತೇಲುತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ವಾಮಿದರ್ಶನ ಹೆಸರಿನ ಬೋಟು ಡಿ.2ರಂದು ದಡಕ್ಕೆ ಬಂದು ಇದ್ದ ಮೀನನ್ನು ಖಾಲಿ ಮಾಡಿದ್ದು, ಸಮುದ್ರದ ಅಲೆಗಳ ಅಬ್ಬರ ಜಾಸ್ತಿ ಇದ್ದ ಕಾರಣ ಮೀನುಗಾರಿಕೆಗೆ ಹೋಗಲಾಗದ ಹಿನ್ನೆಲೆಯಲ್ಲಿ ಬೋಟಿನ ಕೆಲಸಗಾರರೆಲ್ಲ ಊರಿಗೆ ತೆರಳಿದ್ದರು. ಬೋಟಿನಲ್ಲಿ ಬೆಲೆ ಬಾಳುವ ವಸ್ತುಗಳಿದ್ದ ಕಾರಣ ಗೋಪಾಲ ಅವರು ಬೋಟಿನಲ್ಲೇ ರಾತ್ರಿ ಉಳಿದುಕೊಳ್ಳುತಿದ್ದರು. ಆದರೆ ಡಿ.6ರಂದು ಅವರ ಮೃತಶರೀರ ಬೋಟು ನಿಲ್ಲಿಸಿದ ಜಾಗದ ಸಮೀಪ ಸಮುದ್ರದ ನೀರಿನಲ್ಲಿ ಕಂಡುಬಂದಿತ್ತು.
ಗೋಪಾಲ ಅವರು ಡಿ.5ರ ರಾತ್ರಿ 9ಗಂಟೆಯಿಂದ ಬೆಳಗ್ಗೆ 9 ಗಂಟೆ ಮಧ್ಯೆ ಮೀನಿನ ಬಲೆಯನ್ನು ಸರಿಪಡಿಸುತಿದ್ದಾಗ ಅಥವಾ ಇನ್ನಾವುದೋ ಕಾರಣದಿಂದ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಊಹಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





