ಎರ್ಮಾಳು:ಅಪಘಾತದಿಂದ ಮೃತ್ಯು; ಆರೋಪಿ ಕಾರು ಚಾಲಕನಿಗೆ ಶಿಕ್ಷೆ
ಉಡುಪಿ, ಡಿ.7: ನಾಲ್ಕು ವರ್ಷಗಳ ಹಿಂದೆ ಪಡುಬಿದ್ರೆ ತೆಂಕ ಎರ್ಮಾಳು ಗ್ರಾಮದ ಎರ್ಮಾಳು ಬೋರ್ಡ್ ಶಾಲೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬರ ಸಾವಿಗೆ ಕಾರಣರಾದ ಕಾರು ಚಾಲಕ ಕಾಸರಗೋಡಿನ ರಮೊಹಿದ್ದೀನ್ ಅಬುಲ್ ರಹಿಮಾನ್ ನಿಗೆ ಉಡುಪಿ ನ್ಯಾಯಾಲಯ ಒಂದು ವರ್ಷ ಮೂರು ತಿಂಗಳ ಶಿಕ್ಷೆ ಹಾಗೂ ಒಟ್ಟು 2000ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡಿನ ಅಬ್ದುಲ್ ರಹ್ಮಾನ್ ರ ಪುತ್ರರಾದ ರಮೊಹಿದ್ದೀನ್ ಅಬುಲ್ ರಹಿಮಾನ್ 2013ರ ಫೆ.24ರಂದು ಅಪರಾಹ್ನ 1:30ರ ಸುಮಾರಿಗೆ ತನ್ನ ಮಾರುತಿ ಅಲ್ಟೋ ಕಾರನ್ನು ಉಡುಪಿ ಕಡೆಯಿಂದ ಮಂಗಳೂರಿನತ್ತ ಅತೀ ವೇಗ ಹಾಗೂ ನಿರ್ಲಕ್ಷ್ಯ ದಿಂದ ಚಲಾಯಿಸಿಕೊಂಡು ಬಂದು ಎರ್ಮಾಳು ಬೋರ್ಡ್ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಸಾದಿಯಾ ಸದಪ್ ಮತ್ತು ಸಾಹಿಮಾ ಪರ್ವಿನ್ ಎಂಬ ಮಕ್ಕಳಿಗೆ ಢಿಕ್ಕಿ ಹೊಡೆದಿದ್ದರು. ಇದರ ಪರಿಣಾಮ ಸಾಹಿಮಾ ಪರ್ವಿನ್‌ಗೆ ತೀವ್ರತರದ ಗಾಯವಾಗಿದ್ದು, ಸಾದಿಯಾ ಸದ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಪ್ರಕರಣದ ಕುರಿತಂತೆ ಕಾಪು ಠಾಣೆಯ ಅಂದಿನ ವೃತ್ತ ನಿರೀಕ್ಷಕ ಶಿವಾನಂದ ಎಸ್. ವಾಲೆಕರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣೆ ಪತ್ರ ಸಲ್ಲಿಸಿದ್ದರು.
ಈ ಪ್ರಕರಣ ಉಡುಪಿ 2ನೇ ಹೆಚ್ಚುವರಿ ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶೆ ಶೋಭಾ ಇ. ಅವರು ಆರೋಪಿ ವಿರುದ್ದದ ಪ್ರಕರಣ ಸಾಬೀತಾಗಿರುವುದಾಗಿ ತೀರ್ಮಾನಿಸಿ, ಆರೋಪಿಗೆ ಬಾ.ದಂ.ಸಂ ಕಲಂ 279, 338, 304(ಎ)ರಡಿ 1 ವರ್ಷ 3 ತಿಂಗಳು ಶಿಕ್ಷೆ ಮತ್ತು ಒಟ್ಟು 2000ರೂ.ಗಳ ದಂ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
ಆರೋಪಿಗೆ ಶಿಕ್ಷೆ
ತನ್ನ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 14ಮಂದಿ ಪ್ರಯಾಣಿಕರು ಗಾಯಗೊಳ್ಳಲು ಕಾರಣರಾದ ಟೆಂಪೊ ಚಾಲಕನಿಗೆ ಐದು ತಿಂಗಳ ಶಿಕ್ಷೆ ಹಾಗೂ 2000ರೂ. ದಂಡವನ್ನು ಉಡುಪಿ ನ್ಯಾಯಾಲಯ ವಿಧಿಸಿ ತೀರ್ಪು ನೀಡಿದೆ.
2013ರ ಮಾ.28ರಂದು ಅಪರಾಹ್ನ 2:30ರ ಸುಮಾರಿಗೆ ಅಲೆವೂರಿನ ಆರೋಪಿ ರಮೇಶ್ ಬಳೆಗಾರ ತನ್ನ ಟೆಂಪೊವನ್ನು ಹಿರಿಯಡ್ಕ ಕಡೆಯಿಂದ ಉಡುಪಿಯತ್ತ ವೇಗವಾಗಿ ಚಲಾಯಿಸಿಕೊಂಡು ಬಂದು ಅಂಜಾರು ಗ್ರಾಮದ ಓಂತಿಬೆಟ್ಟು ಶ್ರೀದುರ್ಗಾ ಕಲ್ಯಾಣ ಮಂಟಪದ ಎದುರು ಉಡುಪಿಯಿಂದ ಕೊಪ್ಪದ ಸಾಗುತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿ ಹೊಡೆದಿತ್ತು.
ಇದರಿಂದ ಬಸ್ಸಿನಲ್ಲಿದ್ದ ಸುಮಾರು 14 ಮಂದಿ ಪ್ರಯಾಣಿಕರಿಗೆ ಸಾಮಾನ್ಯ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಈ ಬಗ್ಗೆ ಉಡುಪಿ ಠಾಣೆಯ ಅಂದಿನ ಪೋಲೀಸು ಉಪ ನಿರೀಕ್ಷಕರಾದ ಮಂಜುಳಾ ಕೆ.ಎಂ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯು ಉಡುಪಿ ಪ್ರಧಾನ ಸಿ.ಜೆ.(ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಮಹಮ್ಮದ್ ಇರ್ಫಾನ್ ಆರೋಪಿ ಮೇಲಿನ ಪ್ರಕರಣ ಸಾಬೀತಾಗಿರುವುದಾಗಿ ತೀರ್ಮಾನಿಸಿ 5 ತಿಂಗಳು ಶಿಕ್ಷೆ ಹಾಗೂ ಒಟ್ಟು 2000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದರು. ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮುಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.







