ಉದ್ರಿ ಕ್ಷೇತ್ರದ ತಾ.ಪಂ ಸದಸ್ಯ ಬಂಗಾರಪ್ಪ ಗೌಡ ಬಿಜೆಪಿಗೆ ಸೇರ್ಪಡೆ

ಸೊರಬ,ಡಿ.8 : ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮತ್ತೆ ಬಿಜೆಪಿಗೆ ಬಂದಿರುವ ನಾನು, ಮುಂದಿನ ದಿನದಲ್ಲಿ ಮುಖಂಡರು ಸರಿಯಾಗಿ ನಡೆದುಕೊಳ್ಳದಿದ್ದಲಿ ಒಂದು ವಾರದಲ್ಲಿ ತಾಲೂಕು ಪಂಚಾಯತ್ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ತಾಪಂ ಸದಸ್ಯ ಬಂಗಾರಪ್ಪ ಗೌಡ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಜೆಡಿಎಸ್ ಸೇರ್ಪಡೆಗೊಂಡಿದ್ದ ತಾಲೂಕಿನ ಉದ್ರಿ ಕ್ಷೇತ್ರದ ತಾಪಂ ಸದಸ್ಯ ಬಿಜೆಪಿಯ ಬಂಗಾರಪ್ಪ ಗೌಡ ಶುಕ್ರವಾರ ಕುಮ್ಮೂರಿನ ತಮ್ಮ ಮನೆಯಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡು ಅವರು ಮಾತನಾಡಿದರು.
ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಿಸಿದ ಕಾರಣ ಮತ್ತು ಪಕ್ಷದಲ್ಲಿ ಉಂಟಾಗಿದ್ದ ಗೊಂದಲದಿಂದಾಗಿ ತಾವು ಪಕ್ಷ ತ್ಯಜಿಸಿ, ಜೆಡಿಎಸ್ ಸೇರ್ಪಡೆಯಾಗಿದ್ದೆ, ಆದರೆ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದ ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಳ್ಳದೇ ತಿರ್ಮಾನ ಕೈಗೊಂಡಿದ್ದೆ. ಕಾರ್ಯಕರ್ತರ ಒತ್ತಡದಿಂದಾಗಿ ಇಂದು ಮತ್ತೆ ಬಿಜೆಪಿಗೆ ಮರಳುತ್ತಿದ್ದೇನೆ . ಈ ಕಾರಣದಿಂದಾಗಿ ಕಾರ್ಯಕರ್ತರ ಮತ್ತು ಮತದಾರರ ಕ್ಷಮೆ ಯಾಚಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಪಂ ಸದಸ್ಯ ಸತೀಶ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಾವಲಿ ನಾಗರಾಜ ಗೌಡ, ತೊಗರ್ಸಿ ಗ್ರಾಪಂ ಅಧ್ಯಕ್ಷ ಪರಮೇಶ್ವರಪ್ಪ, ಕೊಡಕಣಿ ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ, ಪ್ರಮುಖರಾದ ಜಗದೀಶ ಕೊಡಕಣಿ, ಸುರೇಶ್, ಬಸವಂತಪ್ಪ, ಗುರುಸ್ವಾಮಿ ಗುಡವಿ, ವೀರಭದ್ರ ನಾಯ್ಕ್, ಷಡಾಕ್ಷರಿ ಮತ್ತಿತರರಿದ್ದರು.







