ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರು: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು, ಡಿ. 7: ಸುಳ್ಳು ಹೇಳುವುದರಲ್ಲಿ ಬಿಜೆಪಿ ನಾಯಕರು ನಿಸ್ಸಿಮರು. ಬಿಜೆಪಿ ಪರಿವರ್ತನಾ ಯಾತ್ರೆ ಬೀದರ್ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಎಲ್ಲ ಕಡೆಗಳಲ್ಲಿ ಖಾಲಿ ಕುರ್ಚಿಗಳಿದ್ದವು. ಜನತೆ ಅವರಿಗೆ ಯಾವುದೇ ರೀತಿಯಲ್ಲಿಯೂ ಸ್ಪಂದಿಸಿಲ್ಲ ಎಂದು ಹೇಳಿದರು.
ಡಿ.13ಕ್ಕೆ ಜಿಲ್ಲೆಗೆ ಸಿಎಂ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶುಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.13ಕ್ಕೆ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ. ಬಹುದಿನಗಳಿಂದ ನೆನೆಗುದಿಗೆ ಬಿದಿದ್ದ ಕಾರಂಜಾ ನಾಲಾ ಆಧುನಿಕರಣ, ಬಸವಕಲ್ಯಾಣದ 15 ಕೆರೆ ತುಂಬಿಸುವ ಯೋಜನೆ ಹಾಗೂ ಸಭಾಭವನ ಉದ್ಘಾಟನೆ ನೆರವೇರಿಸಲಿದ್ದಾರೆಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣಕ್ಕೆ ಕುಡಿಯುವ ನೀರಿನ ಕೈಗೆತ್ತಿಕೊಳ್ಳಲಾಗಿದೆ. ರೈತರ ಸಾಲಮನ್ನಾದಿಂದ ಜಿಲ್ಲೆಯ 1.60 ಲಕ್ಷ ಮಂದಿ ರೈತರಿಗೆ ಅನುಕೂಲವಾಗಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರದಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದರು.
ಒಗ್ಗೂಡುತ್ತೇವೆ: ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಸಾಹಿತ್ಯದಲ್ಲಿ ವೀರಶೈವ, ರೂಢಿಯಲ್ಲಿ ಲಿಂಗಾಯತ. ಮೂವತ್ತು ವರ್ಷಗಳ ಹಿಂದೆಯೇ ಪ್ರತ್ಯೇಕ ಧರ್ಮಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಣೆ ನೀಡಿದರು.
ಲಿಂಗಾಯತ ಮತ್ತು ವೀರಶೈವ ನಾವೆಲ್ಲ ಒಂದೇ. ಸಿಎಂ ಸಿದ್ದರಾಮಯ್ಯನವರಿಗೆ ಮಹಾಸಭಾದಿಂದ ಸನ್ಮಾನ ಮಾಡಿದ ಸಂದರ್ಭದಲ್ಲಿ ಅವರು ಎಲ್ಲರೂ ಒಗ್ಗಟ್ಟಿನಿಂದ ಬಂದರೆ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ನಾವೆಲ್ಲರೂ ಒಗ್ಗೂಡುತ್ತೇವೆ ಎಂದರು.
ನಗರೋತ್ಥಾನ ಯೋಜನೆಯಡಿ ಒಟ್ಟು 2,874 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಉದ್ಯಾನವನ, ಬೀದಿ ದೀಪ ಸೇರಿದಂತೆ ನಗರಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದೆಂದ ಅವರು, ನಗರಗಳ ನೈರ್ಮಲ್ಯ ಕಾಪಾಡಲು ವಿಶೇಷ ಆಸ್ಥೆ ವಹಿಸಲಾಗುವುದು ಎಂದರು.







