ಒಳನಾಡು ಮೀನಗಾರರ ನೀತಿಗೆ ಶೀಘ್ರ ಅನುಮೋದನೆ: ಪ್ರಮೋದ್ ಮಧ್ವರಾಜ್

ಬೆಂಗಳೂರು, ಡಿ. 8: ಮೀನುಗಾರಿಕೆ ಇಲಾಖೆಯೂ ನೂತನವಾಗಿ ‘ಒಳನಾಡು ಮೀನಗಾರರ ನೀತಿ’ ರಚಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಶೀಘ್ರವೇ ಅನುಮೋದನೆಗೊಳ್ಳಲಿದೆ ಎಂದು ಮೀನಗಾರಿಕೆ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮೀನಗಾರಿಕೆ ಇಲಾಖೆಯು ಇಂದಿನಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ‘ಮತ್ಸಮೇಳ-2017’ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಮೀನಗಾರರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಅವರ ಪ್ರಗತಿಗೆ ಪೂರಕವಾಗಿ ಒಳನಾಡು ಮೀನುಗಾರರ ನೀತಿ ರಚಿಸಲಾಗಿದ್ದು, ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ. ಈ ನೀತಿಯಲ್ಲಿರುವ ಅಂಶಗಳನ್ನು ಅನುಮೋದನೆಗೊಂಡ ಬಳಿಕ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಆದಾಯ: ಮತ್ಸ ಸಂಪತ್ತಿಗೆ ಬೆಂಗಳೂರು ಬೃಹತ್ ಮಾರುಕಟ್ಟೆಯಾಗಿದೆ. ಬೆಂಗಳೂರಿನ ಜನರಿಗೆ ಮೀನಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಅಲ್ಲದೆ, ಇಲ್ಲಿ ಮೀನಿಗೆ ಉತ್ತಮ ಸ್ಪಂದನೆ ಸಿಕ್ಕರೆ, ವಿದೇಶಕ್ಕೂ ಮೀನು ರಫ್ತು ಮಾಡುವ ಅವಶ್ಯಕತೆ ಇಲ್ಲ. ಇನ್ನು ನೀರಾವರಿ ಪ್ರದೇಶದಲ್ಲಿ ಒಂದು ಎಕರೆ ಭೂಮಿಯಲ್ಲಿ ಮೀನು ಕೃಷಿ ಅಳವಡಿಸಿಕೊಂಡರೆ ಕೃಷಿಯ ನಾಲ್ಕು ಪಟ್ಟು ಆದಾಯಗಳಿಸಬಹುದು ಎಂದು ಪ್ರಮೋದ್ ಮಧ್ವರಾಜ್ ಸಲಹೆ ಮಾಡಿದರು.
ಮೀನುಗಾರಿಕೆ ಇಲಾಖೆಗೆ ಅರವತ್ತು ವರ್ಷಗಳು ತುಂಬಿವೆ. ಆದರೆ, ಮೀನುಗಾರರ ಸಮಾಜದಲ್ಲಿ ಹುಟ್ಟಿದ ನಾನು ಇದೇ ಇಲಾಖೆಗೆ ಮಂತ್ರಿಯಾಗಿರುವುದು ಸಂತಸ ತಂದಿದೆ. ಇಂತಹ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಮೇಳದ ಬಗ್ಗೆ ಮಾಹಿತಿ: ‘ಕರ್ನಾಟಕ ಮತ್ಸ್ಯ ಮೇಳ-2017’ ಮೀನುಗಾರಿಕೆ ಇಲಾಖೆಯ ಪ್ರದರ್ಶನಗಳಲ್ಲೊಂದಾಗಿದ್ದು, ಇದೀಗ ಎರಡನೆ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ ಡಿ.11ವರೆಗೂ ಮತ್ತೆ ಮೇಳ ನಡೆಯಲಿದೆ.
ಒಟ್ಟು ಅರವತ್ತುಕ್ಕೂ ಹೆಚ್ಚು ಮೀನು ಮಳಿಗೆಗಳಿದ್ದು, ಅಲಂಕಾರಿಕ ಮೀನು, ಗ್ಯಾಲರಿ, ಬಹು ವಿಷಯಾಧಾರಿತ ಮಾಹಿತಿ ವಿಭಾಗ, ಸ್ವಾದಿಷ್ಟ ಆಹಾರ ಮಳಿಗೆ, ಮೀನಿನ ಖಾದ್ಯ ತಯಾರಿಕೆ, ತಾಜಾ ಮೀನು ಮಾರಾಟ ಮಳಿಗೆಗಳು ಈ ಮೇಳದ ಪ್ರಮುಖ ಆಕರ್ಷಣೆ ಆಗಿದೆ. ನಾಲ್ಕು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳವ ನಿರೀಕ್ಷೆ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜ್ ಕುಮಾರ್ ಖತ್ರಿ, ಇಲಾಖೆ ನಿರ್ದೇಶಕ ಎಚ್. ಎಸ್.ವೀರಪ್ಪಗೌಡ , ಒಳನಾಡು ಜಂಟಿ ನಿರ್ದೇಶಕ ರಾಮಕೃಷ್ಣ, ಜಂಟಿ ನಿರ್ದೇಶಕ (ಕರಾವಳಿ) ರಾಮಾಚಾರ್ಯ ಸೇರಿ ಪ್ರಮುಖರಿದ್ದರು.
‘ಮೀನು ತಿನ್ನಿ’
ತರಕಾರಿ ತಿಂದರೆ ರೋಗಗಳು ಖಚಿತ. ಕ್ರಿಮಿನಾಶಕಗಳು ತರಕಾರಿಯಲ್ಲಿಯೇ ಹೆಚ್ಚಾಗಿರುತ್ತದೆ. ಎಷ್ಟು ಬಾರಿ ಸ್ವಚ್ಛಗೊಳಿಸಿದರು ಅದರಲ್ಲಿನ ಕೀಟನಾಶಕ ಹೋಗುವುದಿಲ್ಲ. ಹೀಗಾಗಿ, ಮೀನು ತಿನ್ನಿ, ಇದರಿಂದ ಮೆದುಳು ಅಭಿವೃದ್ಧಿಯ ಜೊತೆಗೆ ಹೃದೋಗ ಸಂಬಂಧಿ ಕಾಯಿಲೆ ಬರುವುದಿಲ್ಲ.’
-ಪ್ರಮೋದ್ ಮಧ್ವರಾಜ್, ಮೀನುಗಾರಿಕೆ ಸಚಿವ







