ಪ್ರತ್ಯೇಕ ಕಳವು ಪ್ರಕರಣ: ಇಬ್ಬರು ಮಹಿಳೆಯರು ಸೇರಿ ಐವರ ಬಂಧನ

ಬೆಂಗಳೂರು, ಡಿ.8: ನಗರ ವ್ಯಾಪ್ತಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ ಐವರನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿ 16.42 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೈಕ್ ವಶಪಡಿಸಿಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯದ ರಾಜು (31) ಮತ್ತು ಮಾಗಡಿ ರಸ್ತೆಯ ಚೋಳೂರು ಪಾಳ್ಯದ ಗಣೇಶ್ (34) ಎನ್ನುವರನ್ನು ಬಂಧಿಸಿ 15 ಪ್ರಕರಣಗಳು ಹಾಗೂ ರಾಜಾಜಿನಗರ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರಕರಣ, ಚಂದ್ರಾಲೇಔಟ್, ಬ್ಯಾಡರಹಳ್ಳಿ ವ್ಯಾಪ್ತಿಯ ಒಂದೊಂದು ಪ್ರಕರಣವನ್ನು ಪತ್ತೆ ಹಚ್ಚಿ 12.42 ಲಕ್ಷ ರೂ. ಬೆಲೆಯ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ವಿಜಯನಗರದ 4ನೆ ಕ್ರಾಸ್ ನಿವಾಸಿ ಕವಿತಾ (29), ಮೂಲತಃ ಟಿ.ನರಸೀಪುರದ ಕಮಲಮ್ಮ (55) ಮತ್ತು ಉತ್ತರಹಳ್ಳಿ ಮುಖ್ಯರಸ್ತೆಯ ಮತ್ತೊಬ್ಬ ಆರೋಪಿಯನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ. ಐವರ ಬಂಧನದಿಂದ 20 ಪ್ರಕರಣಗಳು ಬೆಳಕಿಗೆ ಬಂದಿದ್ದು, ವಿಚಾರಣೆಗೊಳಪಡಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.





