ಸೋಲಿನ ಭಯದಿಂದ ಪ್ರತಿಪಕ್ಷಗಳಿಂದ ಅಪಪ್ರಚಾರ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಡಿ.8: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ಅದಕ್ಕಾಗಿಯೇ ವಿರೋಧ ಪಕ್ಷಗಳಲ್ಲಿ ಹೆದರಿಕೆಯುಂಟಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದರು.
ಶುಕ್ರವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದುದರಿಂದಲೆ, ಕಾಂಗ್ರೆಸ್ ನಾಯಕರ ಯಾತ್ರೆಗಳ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಸರಕಾರಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಗಳಿಗೆ 50 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂಬುದು ಸುಳ್ಳು. ಮುಖ್ಯಮಂತ್ರಿಗೆ ಹಾರ ಹಾಕಿದ್ದು, ಸ್ವಾಗತಿಸಿದಕ್ಕೆಲ್ಲ ಲೆಕ್ಕ ಕೇಳಿದರೆ ಹೇಗೆ ? ಈ ಹಿಂದೆ ಮುಖ್ಯಮಂತ್ರಿ ಯಾವುದೆ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಲಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಒಡೆದ ಮನೆಯಂತಾಗಿದೆ. ಅಲ್ಲಿ ವಾಕ್ ಸ್ವಾತಂತ್ರವಿಲ್ಲ ಎಂದು ಬಿಜೆಪಿ ನಾಯಕ ಉಮೇಶ್‌ಕತ್ತಿ ಹೇಳುತ್ತಿದ್ದಾರೆ. ಅವರ ಮಾತನ್ನು ನಂಬಲೇಬೇಕು. ಉಮೇಶ್ ಕತ್ತಿ ಕಾಂಗ್ರೆಸ್ ಸೇರುವ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿಲ್ಲ. ಮುಖ್ಯಮಂತ್ರಿ ಜತೆ ಚರ್ಚಿಸಿದ್ದರೆ ಅದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಅವರು ಹೇಳಿದರು.
ಉಮೇಶ್‌ಕತ್ತಿ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ. ಅದಕ್ಕೂ ಮುನ್ನ ಹೈಕಮಾಂಡ್, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಮೂಲ ಬಿಜೆಪಿಯವರಲ್ಲಿ ಯಡಿಯೂರಪ್ಪ ಇನ್ನು ಕೆಜೆಪಿಯವರು ಎಂಬ ಭಾವನೆಯಿದೆ. ಆದುದರಿಂದಲೆ, ಬಿಜೆಪಿ-ಕೆಜೆಪಿ ಮೂಲದ ಗುಂಪುಗಳು ರಚನೆಯಾಗಿವೆ. ಚುನಾವಣೆ ವೇಳೆ ಯಡಿಯೂರಪ್ಪರನ್ನು ಬಳಸಿಕೊಂಡು ನಂತರ ಅವರನ್ನು ಮೂಲೆಗುಂಪು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅವರು ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ವಾಹನ ಸಿದ್ಧವಾಗಿದೆ. ಕಳೆದ ಬಾರಿ ಹೆಚ್ಚು ಗಮನ ಕೊಡದೆ ಇದ್ದರಿಂದ ಸೋಲುಂಟಾಯಿತು. ಈ ಬಾರಿ ಆರಂಭದಲ್ಲೆ ಸಿದ್ಧತೆಗಳು ನಡೆಯುತ್ತಿದೆ. ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭಾಷಣಗಳನ್ನು ಈ ವಾಹನದ ಮೂಲಕ ಪ್ರಸಾರ ಮಾಡಲಾಗುವುದು. ಇದು ಯುವ ಮುಖಂಡ ರಿಝ್ವಿನ್ ಅರ್ಶದ್ ಆಲೋಚನೆ ಎಂದು ಪರಮೇಶ್ವರ್ ಹೇಳಿದರು.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ ಎನ್ನುತ್ತಿದ್ದರು. ಆದರೆ, ಈಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಯಿರುವುದಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲ್ಲುವ ನಂಬಿಕೆಯಿದೆ ಎಂದು ಅವರು ತಿಳಿಸಿದರು.
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಕಾಂಗ್ರೆಸ್ ಪಕ್ಷವನ್ನು ಬಿಡಲಿದ್ದಾರೆ ಎಂಬ ವಿಚಾರ ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅಂತಹ ಯಾವುದೆ ಬೆಳವಣಿಗೆಗಳು ನಡೆಯುತ್ತಿಲ್ಲ. ಅವರು ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರು ಯಾಕೆ ಪಕ್ಷ ಬಿಡುತ್ತಾರೆ ಎಂದರು.







