ಮಾಂಬಳ್ಳಿ: ಶಾಸಕರ ಸ್ವಗ್ರಾಮದಲ್ಲಿಲ್ಲ ಸ್ಮಶಾನ !
ಹೆಣ ಹೂಳಲು ಜನತೆಗೆ ನದಿ ದಾಟುವ ಶಿಕ್ಷೆ

ಚಾಮರಾಜನಗರ, ಡಿ. 8: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಮೃತರಾದರೆ ಅವರ ಹೆಣ ಹೂಳಲು ಕುಟುಂಬದವರು ತಮ್ಮ ಜೀವ ಪಣಕ್ಕಿಟ್ಟು ನದಿದಾಟಿ ಶವ ಸಂಸ್ಕಾರ ಮಾಡಬೇಕಾದಂತಹ ಸಂಗತಿ ಬೆಳಕಿಗೆ ಬಂದಿದೆ.
ಕೊಳ್ಳೇಗಾಲ ಪಟ್ಟಣದಿಂದ ಕೇವಲ 6 ಕಿ.ಮೀ. ಅಂತರದಲ್ಲಿರುವ ಮಾಂಬಳ್ಳಿ ಗ್ರಾಮ ಕೊಳ್ಳೇಗಾಲ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಎಸ್.ಜಯಣ್ಣ ಅವರ ಸ್ವಗ್ರಾಮವಾಗಿರುವುದು ವಿಪರ್ಯಾಸ. ಈ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಎಲ್ಲ ಸಮುದಾಯವರೂ ವಾಸವಾಗಿದ್ದಾರೆ. ವಿಪರ್ಯಾಸವೆಂದರೆ ಗ್ರಾಮದಲ್ಲಿರುವ ಯಾವ ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ಇಲ್ಲವಾಗಿದೆ.
ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಬಹುದೊಡ್ಡ ಗ್ರಾಮದಲ್ಲಿ ಮುಸ್ಲಿಂ, ಕ್ರೈಸ್ತ, ಲಿಂಗಾಯಿತ, ದಲಿತರು, ನಾಯಕ, ಕುರುಬ, ಕುಂಬಾರ, ಬ್ರಾಹ್ಮಣ, ಈಡಿಗ, ಒಕ್ಕಲಿಗ ಮೊದಲಾದ ಎಲ್ಲ ಸಮುದಾಯಗಳ ಜನತೆ ವಾಸಿಸುತ್ತಿದ್ದು, ಈ ಸಮುದಾಯಗಳಿಗಾಗಿ ಪ್ರತ್ಯೇಕ ಸ್ಮಶಾನವೇ ಇಲ್ಲವಾಗಿದೆ ಎಂಬುದು ಇಲ್ಲಿನ ನಾಗರಿಕರ ದೂರಾಗಿದೆ.
ಗ್ರಾಮದಲ್ಲಿ ಮೃತಪಡುವವರನ್ನು ಹೂಳಲು ಅಥವಾ ಸುಡಲು ಗ್ರಾಮದಿಂದ 3 ಕಿ.ಮೀ. ದೂರದಲ್ಲಿರುವ ಸರಕಾರಿ ಗೋಮಾಳವನ್ನೇ ಆಶ್ರಯಿಸಿದ್ದಾರೆ. ಕಳೆದ 80 ವರ್ಷಗಳಿಂದ ಯಾವ ಧರ್ಮ, ಜಾತಿಯವರು ಈ ಗ್ರಾಮದಲ್ಲಿ ಮೃತಪಟ್ಟರೂ ಶವ ಸಂಸ್ಕಾರ ಮಾಡಲು ಗೋಮಾಳ ಹಾಗೂ ಖಾಸಗಿ ಜಮೀನಿನ ಮಧ್ಯೆ ಹರಿಯುವ ಸುವರ್ಣಾವತಿ ಹೊನ್ನಹೊಳೆಗೆ ಅಡ್ಡಲಾಗಿ ಕಟ್ಟಿರುವ ಮರದ ಸೇತುವೆ ಮೂಲಕ ದಾಟಿ ಸಾಗಬೇಕಿತ್ತು. ಆದರೆ ಇತ್ತೀಚೆಗೆ ಈ ಮರದ ಸೇತುವೆ ಮುರಿದಿರುವ ಕಾರಣ ಜನರು ನದಿಯ ನೀರಿನಲ್ಲಿ, ಜೀವದ ಹಂಗು ತೊರೆದು ಮೃತಪಟ್ಟವರನ್ನು ಹೊತ್ತು ನದಿ ದಾಟಬೇಕಾದ ಸಂಕಷ್ಟ ಎದುರಿಸುತ್ತಿದ್ದಾರೆ.
ಗ್ರಾಮದಲ್ಲಿ ಕಳೆದ ಬುಧವಾರ ಹಿಂದುಳಿದ ಜನಾಂಗಕ್ಕೆ ಸೇರಿದ ವಯೋವೃದ್ಧರೊಬ್ಬರು ಮೃತಪಟ್ಟಿದ್ದು, ಅವರ ಶವ ಸಂಸ್ಕಾರ ಮಾಡಲು ಸಂಬಂಧಿಕರು ಹೊನ್ನಹೊಳೆಯ ಮಧ್ಯೆ ಹೆಣವನ್ನು ಪ್ರಾಣದ ಹಂಗು ತೊರೆದು ಹೊತ್ತು ಸಾಗಿಸುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ವೀಡಿಯೊ ಮಾಡಿದ್ದರಿಂದ ಶಾಸಕರ ಸ್ವಗ್ರಾಮದ ಸ್ಮಶಾನದ ಕತೆ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಪ್ರತ್ಯೇಕ ಸ್ಮಶಾನ ಇಲ್ಲದಿರುವುದರಿಂದ ಎಲ್ಲ ಸಮುದಾಯಗಳ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮಕೈಗೊಳ್ಳುತ್ತೇನೆ. ಡಿ.ಅಂತ್ಯದೊಳಗೆ ಹೊನ್ನಹೊಳೆ ನದಿಗೆ 2 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು.
ಜಯಣ್ಣ, ಶಾಸಕ, ಕೊಳ್ಳೇಗಾಲ ಕ್ಷೇತ್ರ







