ಚಿಂತಕರ ಹತ್ಯೆ ಆತಂಕಕಾರಿ: ಸಮ್ಮೇಳನಾಧ್ಯಕ್ಷ ಪ್ರೊ.ಓಂಕಾರಪ್ಪ
ಚಿಕ್ಕಮಗಳೂರು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸಖರಾಯಪಟ್ಟಣ (ಕಡೂರು), ಡಿ.8: ನಾಡಿನ ಬಹುದೊಡ್ಡ ಸಂಶೋಧಕ ಮತ್ತು ಚಿಂತಕ ಡಾ.ಎಂ.ಎಂ. ಕಲ್ಬುರ್ಗಿ, ಲಿಂಗಣ್ಣ ಸತ್ಯಂಪೇಟೆ, ಗೌರಿ ಲಂಕೇಶರ ಹತ್ಯೆಗಳು ಪ್ರಗತಿಪರ ಚಿಂತಕರಲ್ಲಿ ಆತಂಕ ಮೂಡಿಸಿದ್ದು, ಹಂತಕರ ಬಂಧನ ಶೀಘ್ರವಾಗಿ ಆಗಬೇಕು ಎಂದು ಸಮ್ಮೇಳನಾಧ್ಯಕ್ಷ ಸಾಹಿತಿ ಪ್ರೊ.ಕೆ. ಓಂಕಾರಪ್ಪ ಹೇಳಿದ್ದಾರೆ.
ಕಡೂರು ತಾಲೂಕು ಸಖರಾಯಪಟ್ಟಣದ ಪಿಯು ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ಚಿಕ್ಕಮಗಳೂರು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಹಾಕವಿ ಲಕ್ಷ್ಮೀಶ ವೇದಿಕೆಯಲ್ಲಿ ಅವರು ಮಾತನಾಡಿದರು.
ಧರ್ಮ ಸಮನ್ವಯ, ಭಾವೈಕ್ಯತೆಯ ನಾಡು ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಉದ್ಭವವಾಗಿರುವ ಧಾರ್ಮಿಕ ವಿವಾದಗಳು ತಣ್ಣಗಾಗಿ ಸಹಿಷ್ಣುತೆ ಎಲ್ಲರ ಧರ್ಮವಾಗಲಿ ಎಂದು ಹಾರೈಸಿದ ಸಮ್ಮೇಳನಾಧ್ಯಕ್ಷರು, ಹಾಗಿಲ್ಲದಿದ್ದರೆ ಕಸ ಮತ್ತು ಕನಕಕ್ಕೆ ಯಾವುದೇ ವ್ಯತ್ಯಾಸವಿಲ್ಲ ಎನ್ನುವ ನೃಪತುಂಗನ ಮಾತನ್ನು ಸ್ಮರಿಸಿದರು.
ಸರಕಾರ ಜಾರಿಗೆ ತಂದಿರುವ ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ಸಂಬಂಧಿಸಿದ ರಂಗಗಳ ಜನರೊಂದಿಗೆ ಚರ್ಚಿಸಿ ತಡಮಾಡದೆ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕನ್ನಡಿಗರ ಮುಂದೆ ಅನೇಕ ಆತಂಕಗಳಿವೆ, ಮುಖ್ಯವಾಗಿ ನುಡಿಯ ಉಳಿಯುವಿಕೆ, ಗಡಿಯ ತಕರಾರು ಬಗೆಹರಿಸಬೇಕು. ಜಲಮೂಲಗಳ ಸಂರಕ್ಷಣೆ, ಅನ್ನದಾತರ ಜಮೀನಿಗೆ ನೀರು ಹರಿಸಿ ಅವರ ಬದುಕನ್ನು ಹಸಿರಾಗಿಸುವ ಪ್ರಯತ್ನಗಳು ಫಲದಾಯಕವಾಗಬೇಕಿದೆ ಎಂದು ಅವರು ಆಶಿಸಿದರು.
ನಗರೀಕರಣ ಪ್ರಕ್ರಿಯೆ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಅಳಿಸಿಹಾಕುವ ಜೊತೆಗೆ, ಗೋಮಾಳಗಳಿಗೆ ಖಾಸಗಿ ಬೇಲಿ ಹಾಕಿಸಿ, ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ನಾಶ, ಸಾಲುಮರಗಳ ಮಾರಣ ಹೋಮಕ್ಕೆ ಕಾರಣವಾಗಿದೆ. ಪಶು, ಪಕ್ಷಿಗಳೂ ನೆಮ್ಮದಿ ಕಳೆದುಕೊಂಡಿವೆ. ಇಂತಹ ಮಾರಕ ಸಂದರ್ಭದಲ್ಲಿ ಅನ್ನಕೊಡುವ ಭೂಮಿಯ, ಅನ್ನದಾತ ರೈತನ ಸಂರಕ್ಷಣೆ ಪ್ರಮುಖ ಕರ್ತವ್ಯವಾಗಬೇಕಿದೆ ಎಂದು ನೆನಪಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗಾರಿಕಾ ಪ್ರಗತಿ ನಿರಾಶಾದಾಯಕವಾಗಿದ್ದು, ಯುವಜನರ ಕೈಗಳಿಗೆ ಉದ್ಯೋಗ ಮರೀಚಿಕೆಯಾಗುತ್ತಿದೆ. ಕೆರೆಗಳು ಮಾಯವಾಗುತ್ತಿವೆ. ಅಂತರ್ಜಲ ನಶಿಸಿದೆ. ಪಶ್ಚಿಮಘಟ್ಟಗಳು ಯಂತ್ರಾಘಾತಕ್ಕೆ ನಲುಗಿವೆ. ನಾಡಿನ ಜೀವನಾಡಿ ಮತ್ತು ಬೆನ್ನೆಲುಬಿನಂತಿರುವ ಸೂಕ್ಷ್ಮ ಪರಿಸರ ರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡತನದ ವಿರಾಟ್‌ರೂಪ ನಮ್ಮಲ್ಲಿ ಜಾಗೃತಗೊಂಡಾಗ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಅಂತಃಶಕ್ತಿ ನಮ್ಮಲ್ಲಿದೆ. ಒಳಜಗಳಗಳು, ಸಂಕುಚಿತತೆ ಇದಕ್ಕೆ ಭಂಗ ತರಬಾರದು. ಜೀವಪರ, ಜನಪರ ಆಲೋಚನೆಗಳು ಹೊಸಬದುಕಿಗೆ, ಬದಲಾವಣೆಗೆ ಅವಕಾಶ ಕಲ್ಪಿಸುತ್ತಲೇ ಸಾಗಲು ಎಲ್ಲರ ಮನಸ್ಸುಗಳು ಏಕಮುಖವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಉದ್ಯೋಗ ನಿಮಿತ್ತವಾಗಿ ತಾನು ಚಿಕ್ಕಮಗಳೂರು ಜಿಲ್ಲೆಯನ್ನು ತೊರೆದರೂ, ತನ್ನನ್ನು ಗುರುತಿಸಿ ನೀವು ನೀಡಿದ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ಇಲ್ಲಿಯೇ ಹುಟ್ಟಿ ಸಾಹಿತ್ಯ ಕೃಷಿ ಮಾಡಿದ ಕಾರಣದಿಂದ ಮತ್ತು ಸಹಜ ಆಸೆಯ ಫಲವಾಗಿಯೇ ಸಂತಸದಿಂದ ಸ್ವೀಕರಿಸಿದರೂ, ಜಾಗೃತ ವಿವೇಕ ಮತ್ತು ವಿನಯದಿಂದ ಮಾತ್ರವೇ ಇಲ್ಲಿ ಕುಳಿತಿರುವುದಾಗಿ ಅವರು ತಿಳಿಸಿದರು.
ವಿವಿಧ ಸಾಹಿತಿಗಳ ಕೃತಿ ಬಿಡುಗಡೆ ಮಾಡಿದ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತು ಮಕ್ಕಳ ಮಾತೃಭಾಷೆಯನ್ನು ಕಸಿಯುತ್ತಿದೆ. ಅಧಿಕಾರಿಗಳು ಮತ್ತು ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ನಾಡಭಾಷೆಗೆ ಕುತ್ತು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಸಿ.ಟಿ.ರವಿ ಕಾರ್ಯಕ್ರಮದ ಸ್ಮರಣ ಸಂಚಿಕೆ ‘ಶಕುನಾದ್ರಿ’ಯನ್ನು ಲೋಕಾರ್ಪಣೆಗೊಳಿಸಿದರು.
ಸ್ಥಳೀಯ ಕಲಾವಿದ ದತ್ತಾತ್ರೇಯ ಕುಮಾರ್ ರಚಿಸಿದ ವರ್ಣಚಿತ್ರಗಳಿಗೆ ಕುಂಚದಿಂದ ಬಣ್ಣ ಬಳಿಯುವ ಮೂಲಕ ಕಲಾ ಪ್ರದರ್ಶನಕ್ಕೆ ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಬಿ. ಮಲ್ಲಿಕಾರ್ಜುನ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಓಂಕಾರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಜಿಪಂ ಸದಸ್ಯ ವಿಜಯಕುಮಾರ್, ಗ್ರಾಪಂ ಅಧ್ಯಕ್ಷ ಎಸ್.ಆರ್.ಯೋಗೀಂದ್ರ, ತಾಪಂ ಸದಸ್ಯ ಆನಂದನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಸದಸ್ಯೆ ಶಕುಂತಲಾ ಮಲ್ಲಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಜಿ. ಶ್ರೀನಿವಾಸಮೂರ್ತಿ, ಕಡೂರು ಘಟಕದ ವೈ.ಎಸ್. ರವಿಪ್ರಕಾಶ್, ಮಹೇಂದ್ರಕುಮಾರ್, ಬಿ.ಲೋಕೇಶ್, ಎಂ.ಆರ್. ಪ್ರಕಾಶ್ ಮತ್ತಿತರರಿದ್ದರು.
ಎಲ್ಲ್ಲ ಭಾಷೆ ಗೌರವಿಸಿ, ಕನ್ನಡ ಭಾಷೆ ಪ್ರೀತಿಸಿ: ಡಿಸಿ ಶ್ರೀರಂಗಯ್ಯ
ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರಗಳು ಮಿಳಿತವಾಗಿ ಎಲ್ಲ ಭಾಷೆಗಳನ್ನು ಸಹಜವಾಗಿ ಸ್ವಾಗತಿಸುವ ನಾವು, ಎಲ್ಲ ಭಾಷೆಗಳನ್ನು ಗೌರವಿಸುವ ಜೊತೆಗೆ ತಾಯಿನುಡಿ ಕನ್ನಡವನ್ನು ಪ್ರೀತಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.
ಶುಕ್ರವಾರ ಸಖರಾಯಪಟ್ಟಣದ ಪಿಯು ಕಾಲೇಜು ಮೈದಾನದ ಮಹಾಕವಿ ಲಕ್ಷ್ಮೀಶ ವೇದಿಕೆಯಲ್ಲಿ 14ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಶ್ರಮಿಸಿದ ಫಲವಾಗಿ ನಾಡು-ನುಡಿ ಸಮೃದ್ಧಗೊಂಡಿದ್ದು, ಜಾಗತೀಕರಣದ ಫಲವಾಗಿ ಮನೆಯಲ್ಲಿ ಕೂಡ ಮಾತೃಭಾಷೆ ಮರೆಯಾಗುವ ಸ್ಥಿತಿ ಇದೆ. ಪೂರ್ವಿಕರ ಸಂಸ್ಕೃತಿ, ಸಂಸ್ಕಾರಗಳಿಗೆ ನಾವು ಋಣಿಯಾಗಿದ್ದು, ಭಾಷೆಯ ಬೆಳಕಿನ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.







