ಮೂಡಿಗೆರೆ: ಮತ್ತೆ ಕಾಣಿಸಿಕೊಂಡ ಹುಲಿ
ಮೂಡಿಗೆರೆ, ಡಿ.8: ಕಿರುಗುಂದ ಗ್ರಾಪಂ ವ್ಯಾಪ್ತಿಯ ಉದುಸೆ ಬಳಿ ಹುಲಿ ಶುಕ್ರವಾರ ಮತ್ತೆ ಕಾಣಿಸಿಕೊಂಡಿದ್ದು, ಸ್ಥಳೀಯರ ಭೀತಿಗೆ ಕಾರಣವಾಗಿದೆ.
ಕಿರುಗುಂದ ಬಳಿಯ ಉದುಸೆ-ಹೊತ್ತಿಕೆರೆ ಮದ್ಯೆ ಹುಲಿ ವಾಸ್ತವ್ಯ ಹೂಡಿದೆ. ಕಳೆದ ಎರಡು ದನಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸೆರೆಯಾಗಿದ್ದ ಹುಲಿ ಇದೀಗ ಅಲ್ಲಿಂದ ಅಧರ್ ಕೀ.ಮಿ. ದೂರದ ರಾಜುಶೆಟ್ಟಿ ಎಂಬವರ ಕಾಫಿ ತೋಟದಲ್ಲಿ ಶುಕ್ರವಾರ ಕಾಣಿಸಿಕೊಂಡಿದೆ. ಮನೆಗೆ ಹೊಂದಿಕೊಂಡಿರುವ ತೋಟದಲ್ಲಿ ಹುಲಿ ಸಂಚಾರವನ್ನು ರಾಜು ಶೆಟ್ಟಿಯವರು ಖುದ್ದಾಗಿ ಗಮನಿಸಿದ್ದಾರೆ.
ಸ್ಥಳಕ್ಕೆ 5 ಮಂದಿ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದಾರೆ. ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪಟಾಕಿ ಸದ್ದಿಗೆ ಹುಲಿ ಬೇರೆ ಕಡೆ ಓಡುವ ಪ್ರಯತ್ನ ಮಾಡುವುದೇ ಎನ್ನುವುದು ನಿಗೂಢ ವಾಗಿದೆ. ಮೊನ್ನೆಯಿಂದಲೂ ಅರಣ್ಯ ಸಿಬ್ಬಂದಿ ವಿವಿಧ ಕಡೆಗಳಲ್ಲಿ ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಯತ್ನ ಮಾಡುತ್ತಿದ್ದಾರಾದರೂ ಹುಲಿಯನ್ನು ಓಡಿಸಲು ಸಾಧ್ಯವಾಗಿಲ್ಲ.
ಸ್ಥಳೀಯರ ಪ್ರಕಾರ ಆಸುಪಾಸಿನಲ್ಲಿ ಎಲ್ಲೆಡೆಯೂ ಹುಲಿಗಳ ಹೆಜ್ಜೆ ಕಾಣಿಸುತ್ತಿದ್ದು, ಒಂದಕ್ಕಿಂತ ಹೆಚ್ಚು ಹುಲಿಗಳು ಇರುವ ಸಾಧ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಶುಕ್ರವಾರ ರಾಜುಶೆಟ್ಟಿಯವರ ತೋಟ ಮತ್ತು ರಸ್ತೆ ಬದಿ ಎರಡು ಟ್ರ್ಯಾಪಿಂಗ್ ಕ್ಯಾಮರಾವನ್ನು ಅಳವಡಿಸಿದೆ.







