ತಾಜ್‌ಮಹಲ್ ನಮ್ಮೆಲ್ಲರದ್ದು : ಸುಪ್ರೀಂಕೋರ್ಟ್
“ಅದನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸಿ”

ಹೊಸದಿಲ್ಲಿ, ಡಿ.8: ತಾಜ್‌ಮಹಲ್ ನಮ್ಮೆಲ್ಲರಿಗೂ ಸೇರಿದ್ದು. ಅದನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸಿ ಸುರಕ್ಷಿತವಾಗಿಡಬೇಕು ಎಂದು ತಿಳಿಸಿರುವ ಸುಪ್ರೀಂಕೋರ್ಟ್, ತಾಜ್‌ಮಹಲ್‌ನ ಸುರಕ್ಷತೆ ಬಗ್ಗೆ ಉತ್ತರ ಪ್ರದೇಶ ಸರಕಾರ ಸುದೀರ್ಘಾವಧಿಯ ಕಾರ್ಯಯೋಜನೆಯೊಂದನ್ನು ರೂಪಿಸಬೇಕು ಎಂದು ಸೂಚಿಸಿದೆ.
ನಾಗರಿಕರನ್ನು ಮತ್ತು ಸಾಂಸ್ಕೃತಿಕ ಪರಂಪರಾ ತಜ್ಞರನ್ನು ಸೇರಿಸಿಕೊಂಡು ತಾಜ್‌ಮಹಲ್ ಮತ್ತದರ ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಕುರಿತು ವ್ಯಾಪಕ ದೃಷ್ಟಿಕೋನದ ಕಾರ್ಯನೀತಿಯನ್ನು ರೂಪಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನೊಳಗೊಂಡಿರುವ ನ್ಯಾಯಪೀಠ ಸೂಚಿಸಿತು.
ತಾಜ್‌ಮಹಲ್ ಶತಮಾನದ ಅವಧಿಗೂ ಶಾಶ್ವತವಾಗಿ ಇರುವಂತೆ ನೀವು ಕ್ರಮ ಕೈಗೊಳ್ಳಬೇಕಿದೆ. ಎಲ್ಲರನ್ನೂ ಸೇರಿಸಿಕೊಂಡು ಕಾರ್ಯನೀತಿಯೊಂದನ್ನು ರೂಪಿಸಬೇಕು. ಮುಂದಿನ 25ರಿಂದ 50 ವರ್ಷಗಳ ಅವಧಿಗಲ್ಲ, 400- 500 ವರ್ಷಾವಧಿಗೂ ಈ ಸ್ಮಾರಕ ಉಳಿಯಬೇಕು ಎಂದು ನ್ಯಾಯಪೀಠ ತಿಳಿಸಿತು.
ರಾಜ್ಯ ಸರಕಾರವು ತಾಜ್‌ಮಹಲ್ ಸುರಕ್ಷತೆಗೆ ಬದ್ಧವಾಗಿದೆ. ತಾಜ್‌ಮಹಲ್ ಬಳಿ ವಾಯುಮಾಲಿನ್ಯ ನಿಯಂತ್ರಿಸಲು ವಿವಿಧ ಪ್ರಾಧಿಕಾರಗಳು ಕಾರ್ಯೋನ್ಮುಖವಾಗಿವೆ. ತಾಜ್‌ಮಹಲ್ ಸುತ್ತಮುತ್ತ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಹಾಗೂ ಉತ್ತರಪ್ರದೇಶದ ಎಡಿಷನಲ್ ಅಡ್ವೊಕೇಟ್ ಜನರಲ್ ಐಶ್ವರ್ಯ ಭಾರತಿ ನ್ಯಾಯಪೀಠಕ್ಕೆ ತಿಳಿಸಿದರು.
ಆದರೆ ಇವೆಲ್ಲಾ ಅಗತ್ಯ ಬಂದಾಗ ತೆಗೆದುಕೊಂಡ ತಾತ್ಕಾಲಿಕ ಕ್ರಮಗಳಾಗಿವೆ. ಯಾವುದೇ ದೀರ್ಘಾವಧಿಯ ಯೋಜನೆಯನ್ನು ರೂಪಿಸಿಲ್ಲ ಎಂದು ಸರಕಾರದ ಬಗ್ಗೆ ಅಸಮಾಧಾನ ಸೂಚಿಸಿದ ನ್ಯಾಯಪೀಠ, ತಾಜ್‌ಮಹಲ್ ಸುರಕ್ಷತೆ ಮತ್ತು ಸಂರಕ್ಷಣೆಗೆ ಒಂದು ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿತು.







