ಪದವಿಪೂರ್ವ ಕಾಲೇಜುಗಳ ಸಮಯ ಬದಲಾವಣೆಗೆ ಚಿಂತನೆ: ವಿಪ ಸದಸ್ಯ ರಘು ಆಚಾರ್

ಚಿತ್ರದುರ್ಗ, ಡಿ.8: ಮುಂದಿನ ಶೈಕ್ಷಣಿಕ ವರ್ಷ ಜೂನ್‌ನಿಂದ ಪದವಿಪೂರ್ವ ಕಾಲೇಜುಗಳು ಆರಂಭಗೊಳ್ಳುವ ಸಮಯದ ಬದಲಾವಣೆಗೆ ಚಿಂತನೆ ಮಾಡಲಾಗುವುದು. ಈ ಸಂಬಂಧ ರಾಜ್ಯ ಸರಕಾರದೊಡನೆ ಮಾತನಾಡುವುದಾಗಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ. ಅವರು ಶುಕ್ರವಾರ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿ, ಪದವಿಪೂರ್ವ ಕಾಲೇಜುಗಳಲ್ಲಿ ಬೆಳಗ್ಗೆ 7:45ಕ್ಕೆ ಪಿಯುಸಿ ಆರಂಭಗೊಂಡು ಮಧ್ಯಾಹ್ನ ಒಂದರವರೆಗೆ ಪಾಠಗಳು ನಡೆಯುತ್ತವೆ. ಹಳ್ಳಿಗಾಡಿನ ಮಕ್ಕಳು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಡಬೇಕಾಗುತ್ತದೆ. ಇದು ಕಷ್ಟವಾಗುವುದರಿಂದ ಮುಂದಿನ ಜೂನ್‌ನಿಂದ ಪದವಿಪೂರ್ವ ಪಿಯು ಕಾಲೇಜುಗಳನ್ನು ಬೆಳಗ್ಗೆ 9:30 ಇಲ್ಲವೆ ಹತ್ತು ಗಂಟೆಗೆ ಆರಂಭಿಸಿ ಸಂಜೆ ನಾಲ್ಕಕ್ಕೆ ಮುಕ್ತಾಯಗೊಳಿಸಲಾಗುವುದು ಎಂದರು.
ಉಪನ್ಯಾಸಕರು ಕೊಠಡಿಗಳ ಕೊರತೆ ಸಮಸ್ಯೆ ಹೇಳಿಕೊಂಡಾಗ, ನೂತನ ಕೊಠಡಿಗಳಿಗೆ ಮಂಜೂರಾತಿ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಬೆಂಚ್ ಮತ್ತು ಡೆಸ್ಕ್‌ಗಳು ಎಷ್ಟು ಬೇಕು ಎಂದು ಪಟ್ಟಿ ಮಾಡಿಕೊಟ್ಟರೆ ಸಿಎಂ ಬಳಿ ಮಾತನಾಡಿ ಅಗತ್ಯ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಒದಗಿಸುವುದಾಗಿ ರಘು ಆಚಾರ್ ಭರವಸೆ ನೀಡಿದರು. ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲಿಯೇ ಓದಬೇಕು ಎಂದು ವಿಧಾನಸೌಧದಲ್ಲಿ ಬಿಲ್ ಮಂಡಿಸಿದ್ದು, ಸದ್ಯದಲ್ಲಿಯೇ ಅದಕ್ಕೆ ಒಪ್ಪಿಗೆ ಸಿಗಲಿದೆ. ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಮಕ್ಕಳು ಸರಕಾರಿ ಶಾಲೆಯಲ್ಲಿಯೇ ಓದುವಂತಾದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತವೆ ಎಂದರು.
ನಗರಸಭೆೆ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಗೊಪ್ಪೆ, ಕಾಂಗ್ರೆಸ್ ಮುಖಂಡ ಎಂ.ಎ.ಸೇತೂರಾಂ, ಎಸ್.ಆರ್.ಎಸ್.ಕಾಲೇಜಿನ ಚೇರ್ಮನ್ ಎಸ್.ಆರ್.ಲಿಂಗಾರೆಡ್ಡಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಸ್.ರಾಜೇಂದ್ರಪ್ರಸಾದ್, ಪಿಯು ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ್ ಸಜ್ಜನ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.







