ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರ ಕರಡು ಮತದಾರರ ಪಟ್ಟಿ ಪ್ರಕಟ
ಉಡುಪಿ, ಡಿ.8: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರು ಮೈಸೂರು ಇವರು ನ.21ರಂದು ಪ್ರಕಟಿಸಿದ್ದು, ಈ ಕರಡು ಮತದಾರರ ಪಟ್ಟಿಯು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಕಮೀಷನರ್ ಕುಂದಾಪುರ, ತಾಲೂಕು ಕಚೇರಿ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ವಿಶೇಷ ತಹಶೀಲ್ದಾರರ ಕಚೇರಿ ಬ್ರಹ್ಮಾವರ, ಬೈಂದೂರು ಮತ್ತು ಉಡುಪಿ ನಗರಸಭೆ, ಪುರಸಭೆ ಕಾಪು, ಕುಂದಾಪುರ, ಕಾರ್ಕಳ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಹಾಗೂ ಪರಿಶೀಲನೆಗಾಗಿ ಇಡಲಾಗಿದೆ.
ಮತದಾರರ ಪಟ್ಟಿಯ ತಯಾರಿಕೆಗೆ ನ.1 ಅರ್ಹತಾ ದಿನಾಂಕವಾಗಿದ್ದು, ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಯಾವುದಾದರೂ ಕ್ಲೇಮು ಗಳಿದ್ದಲ್ಲಿ ಅಥವಾ ಯಾವುದೇ ನಮೂದುಗಳ ವಿವರದ ಬಗ್ಗೆ ಆಕ್ಷೇಪಗಳಿದ್ದಲ್ಲಿ ಅಂತಹವುಗಳನ್ನು ಡಿ.21ರೊಳಗೆ ನೀಡಲು ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ನಿಗದಿಪಡಿಸಿದೆ.
ಈ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲಾ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ನೋಂದಾಯಿ ಸಲ್ಪಟ್ಟಿದೆಯೇ ಎಂಬುದನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೇ ನೋಂದಾಯಿಸಲ್ಪಟ್ಟ ಯಾವುದಾದರೂ ನಮೂದುಗಳು ತಪ್ಪಾಗಿ ಮುದ್ರಣವಾಗಿದ್ದಲ್ಲಿ ಅದನ್ನು ತಿದ್ದುಪಡಿ ಮೂಲಕ ಸರಿಪಡಿಸುವ ಬಗ್ಗೆ ಕ್ಲೇಮು ಮತ್ತು ಆಕ್ಷೇಪಣೆಗಳನ್ನು ಖುದ್ದಾಗಿ ಈ ಮೇಲಿನ ಕಚೇರಿಗಳಲ್ಲಿ ಸಲ್ಲಿಸಬಹುದು.
ಈ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಾಕಿ ಇರುವ ಸಾರ್ವಜನಿಕರು ನಿಗದಿಪಡಿಸಿದ ನಮೂನೆ 18 ಮತ್ತು ನಮೂನೆ 19ನ್ನು ಭರ್ತಿ ಮಾಡಿ ಅವಶ್ಯವುಳ್ಳ ದಾಖಲೆಗಳೊಂದಿಗೆ ಡಿ.21ರೊಳಗೆ ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಕಮೀಷನರ್ ಕಚೇರಿ ಹಾಗೂ ತಾಲೂಕು ಕಚೇರಿಗಳಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.







