ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಲು ಸಾಹಿತಿ ನಾ.ಡಿಸೋಜ ಕರೆ
.jpg)
ಸಾಗರ, ಡಿ.8: ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು ಸದಾ ಒತ್ತಡದಲ್ಲಿ ಇರುತ್ತಾರೆ. ಕೆಲಸದ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಇಲಾಖೆ ವ್ಯಾಪ್ತಿಯ ನೌಕರರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದು ಸಾಹಿತಿ ಡಾ. ನಾ.ಡಿಸೋಜ ಕರೆ ನೀಡಿದ್ದಾರೆ.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರ ಅತ್ಯಂತ ವಿಸ್ತಾರವಾಗಿ ಬೆಳೆದು ನಿಂತಿದೆ. ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡಯುವಂತೆ ಸರಕಾರಿ ಆಸ್ಪತ್ರೆ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ಸಿಬ್ಬಂದಿಯನ್ನು ನಾವು ಅತ್ಯಂತ ಗೌರವದಿಂದ ಕಾಣಬೇಕು. ತಮ್ಮ ಕುಟುಂಬದ ಹಿತವನ್ನು ಮರೆತು ಅವರು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆಯ ಖಾಯಂ ನೌಕರರು ಇಂತಹ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಗಬೇಕು. ಮುಂದಿನ ದಿನಗಳಲ್ಲಿ ಎಲ್ಲ ನೌಕರರು ಒಟ್ಟಾಗಿ ಸೇರಿ ಕ್ರೀಡಾ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕೆಲವೊಂದು ಕಡೆ ಕಂಡು ಬರುತ್ತಿದೆ. ಸರಕಾರ ವೈದ್ಯರಿಗೆ ಸಾಕಷ್ಟು ವೇತನ ಸೌಲಭ್ಯ ಕೊಡಲು ಸಿದ್ಧವಿದೆ. ಆದರೆ ವೈದ್ಯ ಪದವಿ ಪಡೆದವರು ಖಾಸಗಿಯಾಗಿ ಕೆಲಸ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ದುರದೃಷ್ಟಕರ ಸಂಗತಿ. ವೈದ್ಯರ ಇಂತಹ ಧೋರಣೆಯಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದರು. ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿತಕರ ಜೈನ್, ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ಮೋಹನ್, ವ್ಯವಸ್ಥಾಪಕಿ ಪದ್ಮಾವತಿ, ಹಿರಿಯ ಶುಶ್ರೂಷಕಿ ಕಮಲಮ್ಮ ಇದ್ದರು. ಗಾಯಿತ್ರಿ ಪ್ರಾರ್ಥಿಸಿದರು. ರುಕ್ಮಿಣಿ ಸ್ವಾಗತಿಸಿದರು. ರವಿ ವಂದಿಸಿದರು. ರಮ್ಯಾ ಎಸ್. ಹೆಗಡೆ ನಿರೂಪಿಸಿದರು.







