ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ 26 ಸಾವಿರ ಎಕರೆ ಕೈಬಿಡಲು ಪ್ರಸ್ತಾವ: ಸಚಿವ ಕಾಗೋಡು
ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ

► 94 ಸಿ-94 ಸಿಸಿ ಅರ್ಜಿ ಅವಧಿ ವಿಸ್ತರಣೆ
► ಬಗರ್‌ಹುಕುಂ ಮಂಜೂರಾತಿ
► ಶರಾವತಿ ಸಂತ್ರಸ್ತರಿಗೆ ಪರಿಹಾರ
ಶಿವಮೊಗ್ಗ, ಡಿ. 8: ಜಿಲ್ಲೆಯಲ್ಲಿ ಒಟ್ಟು 66,464ಎಕರೆ ಡೀಮ್ಡ್ ಅರಣ್ಯ ಪ್ರದೇಶ ಗುರುತಿಸಲಾಗಿದ್ದು, ಇದರ ಪೈಕಿ 26,600 ಎಕರೆ ಪ್ರದೇಶವನ್ನು ಕೈಬಿಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಡೀಮ್ಡ್ ಅರಣ್ಯ ಪ್ರದೇಶ ಕೈ ಬಿಡುವ ಕುರಿತಾಗಿ ಪ್ರತೀ ತಾಲೂಕಿನಲ್ಲಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವನೆಗಳನ್ನು ಅಂತಿಮಗೊಳಿಸಲು ಈ ಹಿಂದೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇದರ ಪ್ರಕಾರ ಕೈ ಬಿಡಬೇಕಾದ ಡೀಮ್ಡ್ ಅರಣ್ಯ ಪ್ರದೇಶಗಳ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಸಾಗರ ವ್ಯಾಪ್ತಿಯಲ್ಲಿ 9,514 ಎಕರೆ, ತೀರ್ಥಹಳ್ಳಿಯಲ್ಲಿ 8,992 ಎಕರೆ ಪ್ರದೇಶವನ್ನು ಒಳಗೊಂಡಿದೆ ಎಂದು ಹೇಳಿದರು.
ಅವಧಿ ವಿಸ್ತರಣೆ: ನಗರ ಪ್ರದೇಶದಲ್ಲಿ ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿರುವವರ ನಿವೇಶನ ಸಕ್ರಮಕ್ಕಾಗಿ 94ಸಿಸಿ ಹಾಗೂ ಗ್ರಾಮೀಣ ಪ್ರದೇಶದವರಿಗೆ 94ಸಿ ಅಡಿಯಲ್ಲಿ ನಿವೇಶನ ಒದಗಿಸಲು ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 4ರವರೆಗೆ ವಿಸ್ತರಿಸಲಾಗಿದೆ. ಅರ್ಹರು ಈ ಅವಧಿಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಮಾರ್ಚ್ ಕೊನೆಯ ಒಳಗಾಗಿ ಎಲ್ಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿರಬೇಕು ಎಂದು ಸಚಿವರು ತಾಕೀತು ಮಾಡಿದರು.
ಬಗರ್‌ಹುಕುಂ ಮಂಜೂರಾತಿ:ಬಗರ್‌ಹುಕುಂ ಮಂಜೂರಾತಿ ಕುರಿತಾಗಿ ಹೈಕೋರ್ಟ್‌ನಲ್ಲಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಾಕಿಯಿರುವ ಎಲ್ಲ ಅರ್ಜಿಗಳನ್ನು ಕಾಲಮಿತಿಯ ಒಳಗಾಗಿ ವಿಲೇವಾರಿ ಮಾಡಬೇಕು. ಇದಕ್ಕಾಗಿ ಪ್ರತೀ ವಾರ ಸಂಬಂಧಪಟ್ಟ ಸಮಿತಿಯ ಸಭೆ ಕರೆದು, ಅರ್ಜಿಗಳನ್ನು ಅಂತಿಮಗೊಳಿಸಿ, ಅರ್ಹರಿಗೆ ಹಕ್ಕುಪತ್ರ ನೀಡಿ ಪಹಣಿಯಲ್ಲಿ ನೋಂದಣಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಬಗರ್‌ಹುಕುಂ ಮಂಜೂರು ಮಾಡಿದರೂ ಹಲವು ಪ್ರಕರಣಗಳಲ್ಲಿ ಇನ್ನೂ ಸಾಗವಳಿ ಚೀಟಿ ನೀಡಿರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸ ಲಾಗುವುದು. ಇದೇ ರೀತಿ ಹಕ್ಕುಪತ್ರ ನೀಡಿದ ತಕ್ಷಣ ಪಹಣಿಯಲ್ಲಿ ನೋಂದಣಿಗೆ ಕ್ರಮ ವಹಿಸಬೇಕು. ಈ ಕುರಿತು ಇನ್ನು ಮುಂದೆ ದೂರುಗಳು ಬಂದರೆ ಸಂಬಂಧಪಟ್ಟ ತಹಶೀಲ್ದಾರ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶರಾವತಿ ಸಂತ್ರಸ್ತರಿಗೆ ಪರಿಹಾರ: ಶರಾವತಿ ಸಂತ್ರಸ್ತರಿಗೆ ಭೂಮಿಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಯೋಜನೆಯ 6,800 ಎಕರೆ ಭೂಮಿಯನ್ನು ಡಿನೋಟಿಪೈ ಮಾಡ ಲಾಗಿದೆ. ಇದರಿಂದ ಬಹುತೇಕ ಸಂತ್ರಸ್ತರಿಗೆ ಸೂಕ್ತ ಭೂಮಿ ದೊರಕಲಿದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಇದ್ದರು.







