ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಒತ್ತಾಯ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆಯಿಂದ ಡಿಸಿಗೆ ಮನವಿ

► ಸರಕಾರ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಿ
►ಹಾನಿಗೊಳಗಾಗಿರುವ ಎಲ್ಲ ಬೆಳೆಗಳಿಗೆ ತುರ್ತಾಗಿ ಪರಿಹಾರ ನೀಡಲಿ
►ಡಾ.ಸ್ವಾಮಿನಾಥ್ ವರದಿ ಜಾರಿಯಾಗಲಿ
►ರೈತರನ್ನು ಖರೀದಿದಾರರು, ದಲ್ಲಾಳಿಗಳ ಕಪಿಮುಷ್ಠಿಯಿಂದ ಪಾರು ಮಾಡಬೇಕು
ಚಿತ್ರದುರ್ಗ, ಡಿ.8: ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಖರೀದಿದಾರರು ಹಾಗೂ ದಲ್ಲಾಳಿಗಳ ಕಪಿಮುಷ್ಠಿಯಿಂದ ರೈತರನ್ನು ಪಾರು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಬಿತ್ತನೆಯಿಂದ ಹಿಡಿದು ಕೊಯ್ಲಿನತನಕ ಇಡೀ ರೈತನ ಕುಟುಂಬವೇ ಬೆವರು ಸುರಿಸಿ ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದ ಸರಕಾರದ ನೀತಿಯಿಂದ ಸಾಲಗಾರನಾಗಿರುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಬೆಳಗಾವಿಯ ಸುವರ್ಣಸೌಧದಲ್ಲಿ 36 ಕೋಟಿ ರೂ. ಖರ್ಚು ಮಾಡಿ ಅಧಿವೇಶನ ನಡೆಸುವ ಅಗತ್ಯ ವಾದರೂ ರಾಜಕಾರಣಿಗಳಿಗೆ ಏನಿತ್ತು ಎಂದು ಪ್ರಶ್ನಿಸಿದರು.
ಅನ್ನದಾತನ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದ ಸರಕಾರದ ಮಲತಾಯಿ ಧೋರಣೆಯಿಂದ ರೈತ ಬೀದಿಪಾಲಾಗುತ್ತಿದ್ದಾನೆ. ದಲ್ಲಾಳಿಗಳು, ಖರೀದಿದಾರರು ಮಾರುಕಟ್ಟೆಯಲ್ಲಿ ಮೋಸ ಮಾಡುತ್ತಿದ್ದರು ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡು ಕಾಣದಂತೆ ನಿದ್ದೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ರೈತರು ಬೆಳೆಯುವ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ರಾಗಿ, ಜೋಳ ಹೀಗೆ ಎಲ್ಲ ಬಗೆಯ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದ ಕಾರಣ ಸರಕಾರ ಮಧ್ಯ ಪ್ರವೇಶಿಸಿ ಖರೀದಿ ಕೇಂದ್ರ ಆರಂಭಿಸಿ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಸೈನಿಕ ಹುಳಗಳಿಂದ ಹಾನಿಗೊಳಗಾಗಿರುವ ಎಲ್ಲ ಬೆಳೆಗಳಿಗೆ ತುರ್ತಾಗಿ ಪರಿಹಾರ ನೀಡಬೇಕು, ಕೇಂದ್ರ ಸರಕಾರ ಡಾ.ಸ್ವಾಮಿನಾಥ್ ವರದಿಯನ್ನು ಕೂಡಲೇ ಜಾರಿಗೊಳಿಸಲಿ, ಕೃಷಿ ಪಂಪ್‌ಸೆಟ್‌ಗಳಿಗೆ ವಾರದಲ್ಲಿ ಒಂದು ದಿನ ವಿದ್ಯುತ್ ಸರಬರಾಜು ನಿಲ್ಲಿಸುವುದನ್ನು ರದ್ದುಪಡಿಸಬೇಕು, ಗ್ಯಾಸ್ ಸರಬರಾಜು ಮಾಡುವ ಗೇಲ್ ಕಂಪೆನಿಯು ರೈತರ ಜಮೀನಿನಲ್ಲಿ ತೆರವುಗೊಳಿಸಿದ ವಡ್ಡುಗಳು ಮತ್ತು ಏರಿಗಳ ಕಳಪೆ ಕಾಮಗಾರಿಯಿಂದ ಜಮೀನಿನ ಫಲವತ್ತಾದ ಮಣ್ಣು, ಏರಿಗಳು ಕೊಚ್ಚಿ ಹೋಗಿ ರೈತರಿಗೆ ಅಪಾರ ನಷ್ಟವಾಗಿರುವುದನ್ನು ಸರಿಪಡಿಸಬೇಕು, ರೋಗ ಬಾಧಿತ ಅಡಿಕೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ರೈತರು ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದರು.
ರೈತ ಮುಖಂಡರಾದ ಪಟೇಲ್ ಚಂದ್ರಶೇಖರಪ್ಪ, ಎಲ್.ಮಲ್ಲಿಕಾರ್ಜುನ, ಜಿ.ಕೆ.ನಾಗರಾಜ್, ಶ್ರೀಕಂಠಮೂರ್ತಿ, ಎನ್.ಕೆ.ರಾಜಶೇಖರಪ್ಪ, ಮಂಜುನಾಥ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







