ಬಂಟ್ವಾಳ: ಬಾವಿಗೆ ಬಿದ್ದು ಬಿಜಾಪುರದ ಯುವಕ ಮೃತ್ಯು
ಬಂಟ್ವಾಳ, ಡಿ. 8: ಯುವಕನೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಕಾವಳಮೂಡೂರಿನ ಎನ್.ಸಿ. ರೋಡ್‌ನಲ್ಲಿ ಸಂಭವಿಸಿದೆ. ಬಿಜಾಪುರದ ಇಂಡಿ ತಾಲೂಕಿನ ಬರಟ್ಟೂರು ನಿವಾಸಿ ಧರಿಯಪ್ಪ ಅವರ ಪುತ್ರ ಕುಮಾರ್(18) ಮೃತ ಯುವಕ.
ಎನ್.ಸಿ.ರೋಡ್‌ನ ಮನೆಯೊಂದರ ಕಾಮಗಾರಿಯ ಮಣ್ಣು ತೆಗೆಯುವ ಕಾರ್ಯಕ್ಕೆ ಜೆಸಿಬಿ ಯಂತ್ರದ ಆಪರೇಟರ್‌ನೊಂದಿಗೆ ಕುಮಾರ್ ಆಗಮಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಪಕ್ಕದಲ್ಲಿದ್ದ ಹಳೆಯ ಬಾವಿಯ ಕಟ್ಟೆಯಲ್ಲಿ ಕುಮಾರ್ ಕುಳಿತುಕೊಂಡಿದ್ದು, ಆಯ ತಪ್ಪಿ ಬಾವಿಯೊಳಕ್ಕೆ ಬಿದ್ದರು ಎನ್ನಲಾಗಿದೆ.
ಆದರೆ ಜೆಸಿಬಿ ಯಂತ್ರದ ಶಬ್ದದಲ್ಲಿ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಜೆಸಿಬಿ ಚಾಲಕ ಈತನನ್ನು ಹುಡುಕಾಡಿದಾಗ ಬಾವಿಯೊಳಗೆ ಬಿದ್ದಿರುವುದು ಗಮನಕ್ಕೆ ಬಂದಿತು ಎನ್ನಲಾಗಿದೆ.
ಬಾವಿ ಸುಮಾರು 58 ಅಡಿ ಆಳವಿದ್ದುದರಿಂದ ತಕ್ಷಣ ಆತನನ್ನು ಮೇಲಕ್ಕೆತ್ತಲು ಸಾಧ್ಯವಾಗದಿರುವುದರಿಂದ ಬಂಟ್ವಾಳ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಯಿಸಿ ಮೃತ ದೇಹವನ್ನು ಮೇಲೆಕೆತ್ತಲಾಗಿದೆ.
ಸುದ್ದಿ ತಿಳಿದ ಪುಂಜಾಲಕಟ್ಟೆ ಠಾಣೆಯ ಎಸ್ಸೈ ರಾಮ ನಾಯ್ಕ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







