‘ಶೈಕ್ಷಣಿಕ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ’

ಮಡಿಕೇರಿ, ಡಿ.8: ವಿದ್ಯಾರ್ಥಿಗಳು ಪೋಷಕರಿಗೆ ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಕೆ.ಜಿ.ಬೋಪಯ್ಯರವರು ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೈಕ್ಷಣಿಕ ಸಾಧನೆಯಿಂದ ದೇಶದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸಬಹುದು ಆದ್ದರಿಂದ ಶಿಕ್ಷಕರ ಗುಣಮಟ್ಟದಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕು ಹಾಗೂ ಸರಕಾರಿ ಶಾಲೆಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆಮಾಡುವಂತೆ ಶಿಕ್ಷಕರಿಗೆ ತಿಳಿಸಿದರು.
ಶಾಸಕರಾದ ಸುನಿಲ್ ಸುಬ್ರಮಣಿ ಮಾತನಾಡಿ, ಶಿಕ್ಷಕರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಆಧುನಿಕ ನೆಲಗಟ್ಟಿನಲ್ಲಿ ಶಿಕ್ಕಕರು ಸಮಾಜವನ್ನು ತಿದ್ದಬೇಕು ಮತ್ತು ಗುರುಗಳಿಗೆ ವಿದ್ಯಾರ್ಥಿಗಳು ವಿಧೇಯಕರಾಗಿರಬೇಕು ಎಂದು ಸಲಹೆ ನೀಡಿದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದರು. ಒನ್.ಟಿ.ಯು.ಸಿ ಮತ್ತು ಸಮಾಜ ಸೇವಕರ ಸಂಘದ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಮಾತನಾಡಿ ಶಿಕ್ಷಕರಿಗೆ ಸಹನೆ, ಶಿಸ್ತು, ಸಂಯಮ ಬಹಳ ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ನೌಕರರ ಪ.ಸೌ.ಬ್ಯಾಂಕ್‌ನ ಅಧ್ಯಕ್ಷರಾದ ಕೆ.ಕೆ.ಮಂಜುನಾಥ್‌ಕುಮಾ ರ್, ಪ್ರಾಂಶುಪಾಲರ ಸಂಘದಅಧ್ಯಕ್ಷೆ ಕೆ.ಎಂ.ಭವಾನಿ, ಸಂತ ಜೋಸೆಫರ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶೋಭಾ ಡಿಸೋಜ, ಪ.ಪೂ.ಕಾ.ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಸಿ.ಎನ್.ವಿಶ್ವನಾಥ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಸಂತ ಜೋಸೆಫ್ ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.







