ನಡಾಲ್, ಮುಗುರುಝ ಐಟಿಎಫ್ ವಿಶ್ವ ಚಾಂಪಿಯನ್ಸ್
ಲಂಡನ್, ಡಿ.8: ಸ್ಪೇನ್ನ ರಫೆಲ್ ನಡಾಲ್ ಹಾಗೂ ಗಾರ್ಬೈನ್ ಮುಗುರುಝ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನ(ಐಟಿಎಫ್) ವಿಶ್ವ ಚಾಂಪಿಯನ್ಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 19 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದೇ ದೇಶದ ಇಬ್ಬರು ಆಟಗಾರರಿಗೆ ಈ ಪ್ರಶಸ್ತಿ ಲಭಿಸಿದೆ.
ನಡಾಲ್ ಮೂರನೇ ಬಾರಿ ಈ ಗೌರವಕ್ಕೆ ಭಾಜನರಾಗಿದ್ದಾರೆ. 2016ರಲ್ಲಿ ಕಾಡಿದ್ದ ಗಂಭೀರ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿದ್ದ ಈ ವರ್ಷ ನಡಾಲ್ 10ನೇ ಬಾರಿ ಫ್ರೆಂಚ್ ಓಪನ್ ಜಯಿಸಿದ್ದಲ್ಲದೆ ಅಮೆರಿಕನ್ ಓಪನ್ ಪ್ರಶಸ್ತಿ ಜಯಿಸಿ ಒಟ್ಟು 16 ಗ್ರಾನ್ಸ್ಲಾಮ್ ಟ್ರೋಫಿ ಗಳನ್ನು ಜಯಿಸಿದ ಸಾಧನೆ ಮಾಡಿದ್ದರು.
31ರ ಹರೆಯದ ನಡಾಲ್ ಮಂಡಿನೋವಿನಿಂದಾಗಿ ವರ್ಷಾಂತ್ಯದ ಎಟಿಪಿ ಟೂರ್ ಫೈನಲ್ಸ್ನಿಂದ ದೂರ ಉಳಿದಿದ್ದರು.
ಈ ವರ್ಷ ವಿಂಬಲ್ಡನ್ ಪ್ರಶಸ್ತಿ ಹಾಗೂ ವಿಶ್ವ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದ ಮುಗುರುಝ ಮೊದಲ ಬಾರಿ ಐಟಿಎಫ್ ಚಾಂಪಿಯನ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 1998ರಲ್ಲಿ ಕೊನೆಯ ಬಾರಿ ಒಂದೇ ದೇಶದ ಇಬ್ಬರು ಆಟಗಾರರು ಐಟಿಎಫ್ ಟ್ರೋಫಿ ಜಯಿಸಿದ್ದರು. ಅಮೆರಿಕದ ಪೀಟ್ ಸಾಂಪ್ರಸ್ ಹಾಗೂ ಲಿಂಡ್ಸೆ ಡೆವೆನ್ಪೋರ್ಟ್ ಈ ಸಾಧನೆ ಮಾಡಿದ್ದರು.