ನನ್ನ ತಂದೆ ನಿರಪರಾಧಿ:ರವಿ ಬೆಳಗೆರೆ ಪುತ್ರಿ ಭಾವನಾ

ಧಾರವಾಡ, ಡಿ. 9: "ನನ್ನ ತಂದೆಯ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಬಲ ಸಾಕ್ಷಾಧಾರಗಳು ಸಿಕ್ಕಿಲ್ಲ. ಅವರು ಶೀಘ್ರದಲ್ಲೆ ನಿರಪರಾಧಿಯಾಗಿ ಹೊರಬರಲಿದ್ದಾರೆ ಎಂದು ಬಂಧಿತ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಹೇಳಿದ್ದಾರೆ.
ಶನಿವಾರ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಮ್ಮ ತಂದೆ ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ವಕೀಲರು ಸಲಹೆ ನೀಡಿದ್ದು, ನಾನು ಏನನ್ನೂ ಹೇಳಲಾರೆ" ಎಂದರು.
"ಈ ಪ್ರಕರಣ ಕೇವಲ ಭೀಮಾ ತೀರದ ಹಂತಕ ಶಶಿಧರ ಮುಂಡೆವಾಡಿ ಅವರ ಒಂದು ಹೇಳಿಕೆ ಮೇಲೆ ನಿಂತಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಪ್ರಕರಣದಲ್ಲಿ ನನ್ನ ತಂದೆ ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸವಿದೆ" ಎಂದು ಅವರು ತಿಳಿಸಿದರು.
"ನನ್ನ ತಂದೆಯ ಭೇಟಿಗಾಗಿ ಬೆಂಗಳೂರಿಗೆ ಹೊರಟಿದ್ದೇನೆ. ಅವರ ಆರೋಗ್ಯ ತುಂಬಾ ಹದಗೆಟ್ಟಿದೆ. ಪ್ರಕರಣ ಯಾವ್ಯಾವ ತಿರುವು ಪಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಮ್ಮ ತಂದೆ ಔಷಧದ ಮೇಲೆ ಇದ್ದು, ಅವರಿಗೆ ಯಾವುದೇ ತೊಂದರೆ ಅಗಬಾರದು" ಎಂದರು.
"ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಈವರೆಗೂ ನನ್ನ ತಂದೆ ವಿರುದ್ಧ ಸುಪಾರಿ ಕೊಲೆ ಸಂಬಂಧ ದೂರು ನೀಡಿಲ್ಲ. ಇದೊಂದು ಕೇವಲ ಆರೋಪವಷ್ಟೇ. ಈ ಪ್ರಕರಣದಲ್ಲಿ ನನ್ನ ತಂದೆ ನಿರಪರಾಧಿಯಾಗಿ ಹೊರಬರಲಿದ್ದಾರೆ" ಎಂದ ಅವರು, "ನನ್ನ ತಂದೆ ಒಬ್ಬ ದೊಡ್ಡ ವ್ಯಕ್ತಿ. ಮಾತ್ರವಲ್ಲ ಹೋರಾಟಗಾರ" ಎಂದು ಹೇಳಿದರು.
"ಇದೊಂದು ಸಣ್ಣ ಪ್ರಕರಣ, ನನ್ನ ತಂದೆಗೆ ಸೋಮವಾರ ಜಾಮೀನು ದೊರೆಯುವ ಸಾಧ್ಯತೆಗಳಿವೆ. ಈ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗುವ ಅಗತ್ಯವಿಲ್ಲ. ಕೇವಲ ಒಂದು ಹೇಳಿಕೆ ಮೇಲೆ ಈ ಕೇಸ್ ನಿಲ್ಲಲ್ಲ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಇದು ಕೋರ್ಟ್‌ನಲ್ಲಿಯೂ ನಿಲ್ಲದು" ಎಂದರು.







