ದಾವಣಗೆರೆ : ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭಾ ಕಾರ್ಯಕ್ರಮ
ದಾವಣಗೆರೆ,ಡಿ.9: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ಗೆ ಸೂಕ್ತ ಸ್ಥಾನ ಮಾನ ನೀಡದ ಕಾಂಗ್ರೆಸ್ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್. ವೀರಯ್ಯ ಕಿಡಿಕಾರಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭಾ ಕಾರ್ಯಕ್ರಮದಲ್ಲಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಕಾಂಗ್ರೆಸ್‍ನವರು ಡಾ. ಬಿ.ಆರ್. ಅಂಬೇಡ್ಕರ್ ಹೆಸರೇಳಿಕೊಂಡು ಓಟ್ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಈವರೆಗೆ ಎಸ್ಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಿಲ್ಲ. ಬಿಎಸ್‍ವೈ ನೇತೃತ್ವದ ಸರ್ಕಾರವಿದ್ದಾಗ ಹಿಂದುಳಿದ ಜನಾಂಗಕ್ಕೆ ಕೋಟಿ ಕೋಟಿ ಅನುದಾನ ನೀಡಲಾಯಿತು. ಆದರೆ, ಕಳೆದ ಮೂರು ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ಜನಾಂಗದ ಅಭಿವೃದ್ಧಿಗೆ 46 ಕೋಟಿ ವ್ಯಯಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಹಾಗಾದರೆ, ಯಾವ ಕಾರಣಕ್ಕೆ? ಎಷ್ಟು ಖರ್ಚು ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು.
ಡಾ.ಅಂಬೇಡ್ಕರ್ ಅವರು ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದಂತ ಮಹಾನ್ ವ್ಯಕ್ತಿ. ಹಿಂದೆ ಕೆಲವೇ ವ್ಯಕ್ತಿಗಳು ಮಾತ್ರ ಮತ ಹಾಕುವ ಹಕ್ಕನ್ನು ಹೊಂದಿದ್ದರು. 1957 ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರು ಮತ ಚಲಾಯಿಸುವ ಹಕ್ಕನ್ನು ಅಂಬೇಡ್ಕರ್ ಅವರು ಕಲ್ಪಿಸಿ, ಒಬ್ಬರಿಗೆ ಒಂದೇ ಓಟು ಎಂಬ ನೀತಿ ಜಾರಿಗೆ ತರುವ ಮೂಲಕ ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟವರು ಎಂದ ಅವರು, ಭಾರತ, ಭಾರತೀಯ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ನಾವೆಲ್ಲರೂ ಒಂದೇ ಎಂದು ಅರಿತಿದ್ದು ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ದೇಶದಲ್ಲಿ ಎಸ್ಸಿ ಜನಾಂಗದವರು ಅತೀಹೆಚ್ಚು ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿರುವುದು ಬಿಜೆಪಿ ಪಕ್ಷದಲ್ಲಿ ಮಾತ್ರ. ಅಷ್ಟರಮಟ್ಟಿಗೆ ಬಿಜೆಪಿ ಸರ್ವಜನಾಂಗಕ್ಕೂ ಸಮಾನತೆ ಕಲ್ಪಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರ ಅಭಿವೃದ್ಧಿ ಮಾಡುವ ಹರಿಕಾರರಂತೆ ಪೋಸು ಕೊಡುತ್ತಿದೆ ವಿನಾ ಈವರೆಗೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಎಳ್ಳಷ್ಟು ಶ್ರಮಿಸಿಲ್ಲ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ವ್ಯಕ್ತಿ. ಕಾಂಗ್ರೆಸ್ ನವರು ದಲಿತರನ್ನು ಕೇವಲ ಮತಕ್ಕಾಗಿ ಉಪಯೋಗಿಸಿಕೊಂಡರೆ ವಿನಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವಂತ ಕೆಲಸ ಮಾಡಲಿಲ್ಲ. ಸ್ವಾತಂತ್ರ ಬಂದ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನವರು ಗುರುತಿಸುವಂತ ಕೆಲಸ ಮಾಡಲಿಲ್ಲ.
ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಪ್ರಕಟಿಸುವಂತ ಕೆಲಸ ಕಾಂಗ್ರೆಸ್ ಮಾಡಲಿಲ್ಲ. ಆದರೆ, ಬಿಜೆಪಿ ಎಸ್ಸಿ, ಎಸ್ಟಿ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವಂತ ಕೆಲಸ ಮಾಡಿದೆ. ಪ್ರಧಾನಿ ಮೋದಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕಾಂಗ್ರೆಸ್‍ನವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಾಕಷ್ಟು ಹಣ ಬಳಕೆ ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಹಣವೇ ಸದ್ಭಳಕೆಯಾಗಿಲ್ಲ. ಆದ್ದರಿಂದ ಬಿಜೆಪಿ ಹೋರಾಟ ನಡೆಸಿ ಆ ಹಣದ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳಬೇಕೆಂದರು.
ಸಭೆಯಲ್ಲಿ ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರುಗಳಾದ ಬಸವರಾಜನಾಯ್ಕ್, ಮಾಡಾಳು ವಿರೂಪಾಕ್ಷಪ್ಪ, ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಎನ್. ನಿಂಗಣ್ಣ, ಹೆಚ್.ಕೆ. ಬಸವರಾಜ್, ನಾಗರಾಜ್ ಮಲ್ಲಾಡಿ, ಆಲೂರು ನಿಂಗರಾಜ್, ಹೆಚ್. ಹನುಮಂತಪ್ಪ, ಹೆಚ್. ಆನಂದಪ್ಪ, ರಮೇಶ್ ನಾಯ್ಕ್, ಸಂಕೋಳ್ ಚಂದ್ರಶೇಖರ್, ಧನಂಜಯ ಕಡ್ಲೆಬಾಳು, ಜಯಮ್ಮ, ರಾಜಶೇಖರ್, ಧನುಷ್ ಮತ್ತಿತರರಿದ್ದರು.







