ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ : ರೇಣುಕಾಚಾರ್ಯ

ದಾವಣಗೆರೆ,ಡಿ.9:ವಾರದೊಳಗೆ ಜನರಿಗೆ ಮರಳು ನೀಡದಿದ್ದರೆ, ನಾನೇ ಖುದ್ದಾಗಿ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ನದಿಡದಕ್ಕೆ ಕೊಂಡ್ಯೊಯ್ದು ಮರಳು ತುಂಬುತ್ತೇನೆ. ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೈಸರ್ಗಿಕ ಮರಳು ಸಾಕಷ್ಟಿದೆ. ಆದರೆ, ಕಾಂಗ್ರೆಸ್‍ನ ಕೆಲ ನಾಯಕರು ಮರಳು ತುಂಬಲು ಅವಕಾಶ ನೀಡದೇ ಕೃತಕವಾಗಿ ಮರಳಿನ ಅಭಾವ ಸೃಷ್ಟಿಸಿ ಮಲೆಷೀಯಾದಿಂದ ಮರಳನ್ನು ತಂದು ಸರಬರಾಜು ಮಾಡುವ ಮೂಲಕ ಕಮಿಷನ್ ಪಡೆದು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಅವರು ದೂರಿದ ಅವರು, ಜನರು ಮನೆ, ಶೌಚಾಲಯ ಕಟ್ಟಲು ಮರಳು ಇಲ್ಲದೇ ಪರದಾಡುತ್ತಿದ್ದಾರೆ.
ಆದರೆ, ಜಿಲ್ಲಾಡಳಿತ ಮಾತ್ರ ಮರಳು ಅಭಾವ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರಳಿನ ಲೋಡ್ ಒಂದಕ್ಕೆ ಕೇವಲ 2 ಸಾವಿರು ರೂ. ನಿಗದಿಸಲಾಗಿತ್ತು. ಆದರೆ, ಇಂದು ಲೋಡ್‍ಗೆ 15 ಸಾವಿರ ರೂ. ವರೆಗೆ ಪಡೆಯಲಾಗುತ್ತಿದೆ.
ನೈಸರ್ಗಿಕ ಮರಳು ಸಾಕಷ್ಟಿದ್ದರೂ, ಎಂಸ್ಯಾಂಡ್ ಮರಳಿನ ಉದ್ಯಮ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ಹಣದಾಸ ನೀಗಿಸಲು, ನದಿದಡದ ಮರಳು ತುಂಬಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದ ಅವರು, ಈ ವಾರದೊಳಗೆ ಮರಳು ತುಂಬಲು ಅವಕಾಶ ನೀಡದಿದ್ದರೆ ಸಾರ್ವಜನಿಕರೊಡಗೂಡಿ ಟ್ರ್ಯಾಕ್ಟರ್, ಲಾರಿ ಸಮೇತ ನದಿದಡದಲ್ಲಿ ಮರಳು ತುಂಬುತ್ತೇನೆ ಎಂದು ಅವರು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.







