ಪೊಲೀಸರಿಗೆ ಸಿಕ್ಕಿರುವ ಸುಳಿವಿನ ಆಧಾರದ ಮೇಲೆ ರವಿ ಬೆಳಗೆರೆ ಬಂಧನ : ಸಿದ್ದರಾಮಯ್ಯ

ಮೈಸೂರು,ಡಿ.9: ಪತ್ರಕರ್ತ ರವಿ ಬೆಳಗೆರೆ ಬಂಧನದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಪೊಲೀಸರಿಗೆ ಏನು ಸುಳಿವು ಇದೆಯೋ ಅದರ ಅಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ರವಿ ಬೆಳಗೆರೆ ಬಂಧನದಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಗರದ ತಮ್ಮ ನಿವಾಸ ಟಿ.ಕೆ.ಲೇಔಟ್‍ನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೂ ಅವರಿಗೂ ಸಂಬಂಧವಿಲ್ಲ. ಪೊಲೀಸರು ಸಾಕ್ಷಿಗಳ ಆಧಾರದ ಮೇಲೆ ಬಂಧನ ಮಾಡಿರಬಹುದು ಎಂದು ಹೇಳಿದರು.
ಇದೇ ಸಂದರ್ಭ ಗುಜರಾತ್ ಚುನಾವಣೆ ಬಗ್ಗೆ ಮಾತನಾಡಿದ ಸಿಎಂ, "ಗುಜರಾತ್‍ನಲ್ಲಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ನಾನು ಕ್ಯಾಂಪೇನ್ ಮಾಡಿಲ್ಲದ ಕಾರಣ ಖಚಿತವಾಗಿ ಹೇಳಲಾಗದು. ಆದರೆ, ಅಲ್ಲಿ ಬಿಜೆಪಿ ಈ ಬಾರಿ ಸೋಲುತ್ತೆ ಎಂಬ ಮುನ್ಸೂಚನೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೇ ಭಡ್ತಿ ಮೀಸಲಾತಿ ಸಂಬಂಧ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ ಎಂದರು. ಇದೇ ವೇಳೆ, ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹಗೆ ಬುದ್ದಿವಾದ ಹೇಳಿದರೆನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಸಂಸದ ಸಿಂಹಗೆ ಬುದ್ಧಿವಾದ ಅಂತಾ ಏನೂ ಹೇಳಿಲ್ಲ. ಆದರೆ, ನಿನ್ನೆ ಒಂದೇ ವೇದಿಕೆಯಲ್ಲಿದ್ದಾಗ ನೀನು ನಿನ್ನ ಆಟಿಟ್ಯೂಡ್ ಮತ್ತು ಲಾಂಗ್ವೇಜ್ ಬದಲಿಸಿಕೋ ಎಂದು ಹೇಳಿದ್ದೇನೆ ಎಂದು ಉತ್ತರಿಸಿದರು.
ನಾನು ಚುನಾವಣಾ ಪೂರ್ವ ಪ್ರವಾಸ ಮಾಡುತ್ತಿರುವೆ, ಡಿಸೆಂಬರ್ 13 ರಿಂದ ಪ್ರವಾಸವನ್ನು ಇನ್ನೂ ನಿರಂತರವಾಗಿ ಮಾಡುತ್ತೇನೆ ಎಂದು ಸಿಎಂ ಹೇಳಿದರು.







