ಸಂವಿಧಾನಕ್ಕೆ ಅಪಚಾರವಾದರೆ ಸಹಿಸುವುದಿಲ್ಲ: ಜಿ.ರಾಜಶೇಖರ್

ಉಡುಪಿ, ಡಿ.9: ಈ ದೇಶದ ಧಮನಿತರು, ಶೋಷಿತರು, ಹಿಂದುಳಿದವರು, ಸಮಾಜದಲ್ಲಿ ಅವಮಾನಕ್ಕೀಡಾದವರಿಗೆ ಸಂವಿಧಾನವೇ ಶ್ರೇಷ್ಠ. ಸಂವಿಧಾನಕ್ಕೆ ಅಪಚಾರವಾದರೆ ನಾವು ಸಹಿಸುವುದಿಲ್ಲ. ನಮಗೆ ಧರ್ಮಕ್ಕಿಂತ ಸಂವಿಧಾನವೇ ಶ್ರೇಷ್ಠ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷಗಳ ಒಕ್ಕೂಟ ಮತ್ತು ಉಡುಪಿ ಜಿಲ್ಲಾ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಂಘಟನೆಗಳ ಮಹಾ ಒಕ್ಕೂಟಗಳ ಆಶ್ರಯದಲ್ಲಿ ಭಾರತದ ಸಂವಿಧಾನವನ್ನು ಒಪ್ಪದ ಪೇಜಾವರ ಶ್ರೀ ಹಾಗೂ ಗೋ. ಮಧುಸೂಧನ್ ದೇಶ ಬಿಟ್ಟು ತೊಲಗಲಿ ಎಂಬ ಆಗ್ರಹದೊಂದಿಗೆ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಯಾವುದೇ ಬೇಧ, ತಾರತಮ್ಯ ಇಲ್ಲದೆ ಎಲ್ಲ ಪ್ರಜೆಗಳು ಸಮಾನರು ಎಂಬ ನೈತಿಕತೆಯನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ ವೈದಿಕ ಯುಗ, ಗುಪ್ತರ ಕಾಲ, ವಿಜಯನಗರದ ಅರಸರ ಆಳ್ವಿಕೆಯಲ್ಲಿ ಎಲ್ಲ ಪ್ರಜೆಗಳು ಸಮಾನರಾಗಿದ್ದರೇ ಎಂದು ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ಮಾತನಾಡುವ ಧರ್ಮದ ವಕ್ತಾರರು ಉತ್ತರಿಸಬೇಕು ಎಂದು ಅವರು ಸವಾಲು ಹಾಕಿದರು.
ಬಾಬರಿ ಮಸೀದಿ ಉರುಳುವುದರೊಂದಿಗೆ ದೇಶದ ಸಂವಿಧಾನ ಅಕ್ಷರಶ: ನೆಲಸಮವಾಯಿತು. ಕಾನೂನಿನ ಎದುರು ಎಲ್ಲರು ಸಮಾನರು ಎಂಬ ನಿಯಮಗಳು ಆ ದಿನ ಮಣ್ಣು ಪಾಲಾದವು ಎಂದ ಅವರು, ಹಿಂದುತ್ವ ಹಿಂಸೆಯ ಬಹಳ ದೊಡ್ಡ ಸಮಸ್ಯೆ ಯಾವುದೆಂದರೆ, ಆ ಹಿಂಸೆಗೆ ಉತ್ತರದಾಯಿತ್ವವೇ ಇಲ್ಲದೆ ಇರುವುದು. ಆ ಮಟ್ಟದಲ್ಲಿ ಸಂಘಪರಿವಾರದಲ್ಲಿ ಶ್ರಮ ವಿಭಜನೆಯಾಗಿದೆ. ಇದು ಸಂವಿಾನದ ಉಲ್ಲಂಘನೆ ಎಂದು ಟೀಕಿಸಿದರು.
ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಉದಯ ಕುಮಾರ್ ತಲ್ಲೂರು ಮಾತನಾಡಿ, ದೇಶದ ಸಂವಿಧಾನವನ್ನು ಬದಲಾವಣೆ ಮಾಡಿದರೆ ಮಧ್ಯ ಏಷ್ಯಾದಿಂದ ಬಂದಿರುವ ಶೇ.2ರಷ್ಟಿರುವ ಆರ್ಯರು ಮತ್ತೆ ಭಾರತವನ್ನು ಕತ್ತಲೆಯತ್ತ ನೂಕಲಿದ್ದಾರೆ. ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳುವ ಪೇಜಾವರ ಶ್ರೀ ದೇಶದ್ರೋಹಿಗಳೆಂದು ಅರ್ಥ. ಈ ದೇಶದ ಸಂವಿಧಾನ ಒಪ್ಪದ ಅವರು ದೇಶವನ್ನು ಬಿಟ್ಟು ಹೋಗ ಬಹುದು. ಈ ದೇಶವನ್ನು ದಲಿತರು ಅಲ್ಪಸಂಖ್ಯಾತರು ಹಿಂದುಳಿವರ್ಗದವರು ಆಳ್ವಿಕೆ ಮಾಡುತ್ತಾರೆ. ಅದಕ್ಕೆ ಅವರು ಅವಕಾಶ ಮಾಡಿಕೊಡಲಿ ಎಂದರು.
ಪೇಜಾವರ ಸ್ವಾಮೀಜಿ ಮತದಾನದ ಹಕ್ಕು ಪಡೆದಿದ್ದರೆ ಅದು ಅಂಬೇಡ್ಕರ್‌ರ ಸಂವಿಧಾನದಿಂದಲೇ ಹೊರತು ಧರ್ಮ ಸಂಸತ್ತಿನಿಂದಲ್ಲ. ಸಂವಿಧಾನ ವಿರೋಧಿ ಯಾಗಿ ಮಾತನಾಡುವ ಗೋ ಮಧುಸೂದನ್‌ನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಬಹುಸಂಖ್ಯಾತ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿ ಬೆಂಗ್ರೆ, ದಸಂಸ ಮುಖಂಡ ಶೇಖರ್ ಹೆಜ್ಮಾಡಿ, ಒಕ್ಕೂಟದ ಜಿಲ್ಲಾಧ್ಯಕ್ಷ ಶ್ಯಾಮ್ ರಾಜ್ ಬಿರ್ತಿ ಮಾತನಾಡಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಪರಮೇಶ್ವರ ಉಪ್ಪೂರು, ಶಂಕರ್ ದಾಸ್ ಚೇಂಡ್ಕಳ, ಚಂದ್ರ ಅಲ್ತಾರು, ಶ್ಯಾಮಸುಂದರ್ ತೆಕ್ಕಟ್ಟೆ, ಪ್ರಶಾಂತ್ ತೊಟ್ಟಂ, ಚಂದ್ರಮ ತಲ್ಲೂರು, ಟಿ.ಅಂಗಾರ, ಸುರೇಶ್ ಪಡುಬಿದ್ರೆ, ಮಂಜು ನಾಥ್ ಬಾಳ್ಕುದ್ರು, ವಿವಿಧ ಸಂಘಟನೆಗಳ ಇದ್ರೀಸ್ ಹೂಡೆ, ಖಲೀಲ್ ಅಹ್ಮದ್, ಅಝೀಝ್ ಉದ್ಯಾವರ, ಪ್ರೊ.ಸಿರಿಲ್ ಮಥಾಯಸ್ ಮೊದಲಾದ ವರು ಉಪಸ್ಥಿತರಿದ್ದರು.
ಮತ್ತೆ ಮಠಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ
ಪೇಜಾವರ ಸ್ವಾಮೀಜಿಗಳೇ ದಲಿತರ ತಂಟೆಗೆ ಬರಬೇಡಿ. ದಲಿತರ ಉದ್ಧಾರ ದಲಿತ ಚಿಂತಕರು, ಹೋರಾಟಗಾರರಿಂದ ಮಾತ್ರ ಸಾಧ್ಯ. ನೀವು ದಲಿತ ಕೇರಿ ಗಳಿಗೆ ಭೇಟಿ ನೀಡುವ ಬದಲು ಬ್ರಾಹ್ಮಣ ಕೇರಿಗಳಿಗೆ ಹೋಗಿ. ನಿಮ್ಮ ಕಟ್ಟು ಕಥೆಗಳು, ಪೊಳ್ಳು ವಾದಗಳನ್ನು ನಾವು ಒಪ್ಪುದಿಲ್ಲ. ನಿಮ್ಮ ಮಾಧ್ವ ದೀಕ್ಷೆ ನಮಗೆ ಬೇಡ. ಧರ್ಮಸಂಸತ್ತಿನಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತನಾಡುವ ನೀವು ಮೊದಲು ಮಠದಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಿಸಿ ದಲಿತರ ಜೊತೆ ಭೋಜನ ಸ್ವೀಕರಿಸಿ. ನೀವು ಕೇಸರಿ ಪಕ್ಷದ ಕುರ್ಚಿ ಭದ್ರಗೊಳಿಸಲು ಮುಂದಾದರೆ ಮತ್ತೆ ಮಠಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಬೇಕಾಗುತ್ತದೆ ಎಂದು ದಸಂಸ ಮುಖಂಡ ಶೇಖರ್ ಹೆಜ್ಮಾಡಿ ಎಚ್ಚರಿಕೆ ನೀಡಿದ್ದಾರೆ.







