ಆಸ್ಪತ್ರೆಗಳು ಆರೋಗ್ಯದ ದೇಗುಲಗಳಾಗಲಿ:ಶ್ರೀವೀರೇಶಾನಂದ ಶ್ರೀಗಳು

ತುಮಕೂರು,ಡಿ.09:ಆಸ್ಪತ್ರೆಗಳು ಆರೋಗ್ಯದ ದೇಗುಲಗಳಾಗಬೇಕು. ಹಾಗೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನಗುಮುಖದಿಂದ ರೋಗಿಗಳನ್ನು ಸ್ಪಂದಿಸಿ,ಉತ್ತಮ ಚಿಕಿತ್ಸೆಯ ಮೂಲಕ ಸೇವೆ ಸಲ್ಲಿಸಬೇಕಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ. ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ.
ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಆಡಿಟೋರಿಯಂನಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ರೋಟರಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗಳಿಸಲು ಶ್ರಮಿಸಿದ ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸೇವೆ ಎನ್ನುವುದು ಅನಾದಿಕಾಲದಿಂದಲೂ ಮಾನವೀಯ ಅಂತಃಕರಣದ ಪ್ರಕ್ರಿಯೆಯಾಗಿದೆ.ಹಾಗೇ ಮನುಷ್ಯನ ಜೀವನದಲ್ಲಿ ನಗುವನ್ನು ಅಳವಡಿಸಕೊಂಡಲ್ಲಿ ಯಾವುದೇ ಕಾರ್ಯದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.
ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ, ವೈಜ್ಞಾನಿಕ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಮನುಷ್ಯನ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ವೈದ್ಯರು, ರೋಗಿಗಳು ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದರು.
ಇಂದಿನ ಯುವ ಪೀಳಿಗೆ ಆಲೋಚನೆಗಳು, ಚಿಂತನೆಗಳು ಹೊರ ತೆಗೆದು ಅದಕ್ಕೆ ಒಂದು ಸ್ವರೂಪ ಕಟ್ಟಿಕೊಡಬೇಕು. ಆಗ ಅದು ನಿಜವಾದ ಯಶಸ್ಸು ಪಡೆಯಲು ಸಾಧ್ಯ.ಯಾವುದೇ ಒಬ್ಬ ವ್ಯಕ್ತಿಯನ್ನು ಅಲ್ಪದೃಷ್ಟಿಯಿಂದ ಕಾಣಬಾರದು. ಏಕೆಂದರೆ ಪ್ರತಿಯೊಬ್ಬರಲ್ಲಿ ತನ್ನದೇ ಆದ ಪ್ರತಿಭೆ ಇರುತ್ತದೆ. ಆದರೆ ಅದನ್ನು ಹೊರತರುವಲ್ಲಿ ವಿಫಲರಾಗುತ್ತಿದ್ದಾರೆ.ಜೀವನದಲ್ಲಿ ಶಿಕ್ಷಣ, ಯೋಗ, ಧ್ಯಾನ ಮತ್ತು ಮನಃಶಾಂತಿಯನ್ನು ರೂಢಿಸಿಕೊಳ್ಳಬೇಕು.
ಸಮಾಜಕ್ಕೆ ಮಾರಕವಾಗಿರುವ ಮದ್ಯಪಾನ, ಧೂಮಪಾನ ದಂತಹ ಕೆಟ್ಟ ದುಶ್ಚಟಗಳಿಂದ ದೂರವಾದಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿ ಸಮಾಜದ ಅಭಿವೃದ್ಧಿ ಹೆಚ್ಚಾಗುತ್ತದೆ.ಸರಕಾರಿ ವೈದ್ಯರು, ಶಿಕ್ಷಕರು, ಇತರೆ ಸಿಬ್ಬಂದಿ ವರ್ಗ ಸಾಮಥ್ಯ ಉಳ್ಳವರು. ಆದರೆ ಅವರ ಸಾಮಥ್ರ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಸಮಾಜ ಉತ್ತಮ ದಾರಿಯಲ್ಲಿ ನಡೆಯಲು ಸೂಕ್ತ ಮಾರ್ಗವಾಗುತ್ತದೆ.ಇಂದಿನ ಬದುಕಿನಲ್ಲಿ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ 100 ವರ್ಷದ ಗುರಿ ಸಾಧನೆಗಳು 60 ವರ್ಷದೊಳಗೆ ಸಾಧಿಸಬೇಕು ಎಂದು ಯುವಕರಿಗೆ ಕರೆ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಕಾಣುವುದು ಒಂದು ಸಾಧನೆಯಾಗಿದೆ.ಆಸ್ಪತ್ರೆಯ ಸಿಬ್ಬಂದಿ ಶಿಸ್ತಿನಿಂದ ಸಕಾರಾತ್ಮಕವಾಗಿ ಕೆಲಸ ಮಾಡಿದ್ದಲ್ಲಿ ಸಮಾಜದ ಆರೋಗ್ಯ ಸುಧಾರಿಸುವುದೋ ಹಾಗೆ ಪ್ರತಿಯೊಬ್ಬರೂ ಮಾನವೀಯತೆಯಿಂದ ಒಬ್ಬರಿಗೆ ಇನ್ನೊಬ್ಬರಿಗೆ ಸಹಾಯ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ಮನುಷ್ಯನಿಗೆ ಎಷ್ಟು ಕೆಲಸ ಸಾಧನೆ ಮಾಡಿದರು,ಆತನಲ್ಲಿ ಇನ್ನು ಸಾಧನೆ ಮಾಡುವ ತವಕ, ಆಸಕ್ತಿ ಹೆಚ್ಚಾಗಬೇಕಾಗಿದೆ. ಇಂದಿನ ಖಾಸಗಿ ಆಸ್ಪತ್ರೆಗಳು ಹೆಚ್ಚು ಬೆಳೆಯುತ್ತಿವೆ ಎಂದರೆ, ಸರಕಾರಿ ಆಸ್ಪತ್ರೆಯ ಬಗ್ಗೆ ಇರುವ ಅಸಮಾಧಾನ. ಇದನ್ನು ಹೋಗಲಾಡಿಸಲು ಸಿಬ್ಬಂದಿ ಪ್ರಯತ್ನಿಸಬೇಕೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ನೌಕರಿಗೆ ಮತ್ತು ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಗೌರವ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಪಿ.ವಿಪಿನ್‍ರಾಜ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮನೀಶ್ ಚೌದ್ರಿ,ಛೇರ್ಮನ್ ರಾಜೀವ್ ಬಸ್ರೂರ್ ಶೆಟ್ಟಿ, ನವದೆಹಲಿಯ ಐ.ಎಫ್.ಆರ್.ಸಿ. ಲೀನ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ತಜ್ಞ ಡಾ.ವೀರಭದ್ರಯ್ಯ, ಡಾ.ಈಶ್ವರಯ್ಯ ಆಸ್ಪತ್ರೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.







