ಸಾಮಾಜಿಕ ನ್ಯಾಯಕ್ಕಾಗಿ ಹಿಂದುಳಿದ ವರ್ಗ ಒಗ್ಗೂಡಬೇಕು: ಸಚಿವ ರೈ
ಡಾ. ರಾಜಶೇಖರ್ ಕೋಟ್ಯಾನ್ ಅಭಿನಂದನಾ ಕಾರ್ಯಕ್ರಮ

ಮಂಗಳೂರು, ಡಿ.9: ಹಿಂದುಳಿದ ವರ್ಗದ ಜನರು ಸಾಮಾಜಿಕ ನ್ಯಾಯದಿಂದ ವಂಚಿತಗೊಂಡರೂ ಕೂಡ ಸ್ವಾಭಿಮಾನದ ಬದುಕಿಗೆ ಹೆಸರುವಾಸಿ ಯಾದವರು. ದ.ಕ. ಜಿಲ್ಲೆಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದ್ದರೂ ಇತ್ತೀಚಿನ ದಿನಗಳಲ್ಲಿ ಮತೀಯ ಸೂಕ್ಷ್ಮ ಜಿಲ್ಲೆ ಎಂಬ ಅಪಖ್ಯಾತಿಗೊಳಗಾಗಿವೆ. ಮತೀಯ ಗಲಭೆಗಳಲ್ಲಂತೂ ಹಿಂದುಳಿದ ವರ್ಗವೇ ಹೆಚ್ಚು ಅನ್ಯಾಯ, ಅಕ್ರಮಕ್ಕೆ ಒಳಗಾಗುತ್ತಿವೆ, ಜೈಲಿಗೂ ತಳ್ಳಲ್ಪಡುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹಿಂದುಳಿದ ವರ್ಗವು ಒಗ್ಗೂಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಡಾ. ರಾಜಶೇಖರ್ ಕೋಟ್ಯಾನ್ ಅಭಿನಂದನಾ ಬಳಗವು ನಗರದ ಡಾ.ಟಿಎಂಎ ಪೈ ಅಡಿಟೋರಿಯಂನಲ್ಲಿ ಶನಿವಾರ ಏರ್ಪಡಿಸಿದ ಡಾ. ರಾಜಶೇಖರ್ ಕೋಟ್ಯಾನ್‌ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರವು ಹಿಂದುಳಿದ ವರ್ಗದ ಏಳಿಗೆಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಚಲನಚಿತ್ರ ರಂಗದಲ್ಲಿ ಸಾಕಷ್ಟು ಸಾಧನೆಗೈದ ಡಾ. ರಾಜಶೇಖರ್ ಕೋಟ್ಯಾನ್ ಹಿಂದುಳಿದ ವರ್ಗವನ್ನು ಒಗ್ಗೂಡಿಸುವ ಸಾಹಸಕ್ಕೆ ಮುಂದಾಗಬೇಕು ಮತ್ತು ಸರಕಾರದ ಯೋಜನೆಗಳು ಈ ವರ್ಗದ ಜನರಿಗೆ ಸಿಗುವಂತಾಗಲು ಪ್ರಯತ್ನಿಸಬೇಕು. ಈ ಮಧ್ಯೆ ಜಿಲ್ಲೆಯಲ್ಲಿ ಸಂಘಪರಿವಾರದ ಪ್ರಾಬಲ್ಯವಿದೆ ಎಂಬ ಹೇಳಿಕೆಯನ್ನು ಸುಳ್ಳಾಗಿಸಲು ರಾಜಶೇಖರ್ ಕೋಟ್ಯಾನ್ ಪ್ರಯತ್ನಿಸಬೇಕು. ಹಿಂದುಳಿದ ವರ್ಗದ ಜನರೇ ಜೈಲಿಗೆ ಹೋಗುವಂತಹ ವಾತಾವರಣ ಯಾಕೆ ಸೃಷ್ಟಿಯಾಗುತ್ತಿದೆ ಎಂಬುದರ ಬಗ್ಗೆ ಅವಲೋಕನ ಮಾಡುವ ಕಾರ್ಯಕ್ರಮ ಆಯೋಜಿಬೇಕು ಎಂದು ಸಚಿವ ರಮಾನಾಥ ರೈ ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಸಾಮಾಜಿಕ, ಚಲನಚಿತ್ರ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಡಾ. ರಾಜಶೇಖರ್ ಕೋಟ್ಯಾನ್ ಸೂಕ್ತ ಸಮಯದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದಾರೆ. ಈ ರಂಗದಲ್ಲಿ ಟೀಕೆ, ಟಿಪ್ಪಣಿ ಸಹಜ. ಅದನ್ನು ಎದುರಿಸಿಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ. ಜಿಲ್ಲೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್‌ರ ಮಾರ್ಗದರ್ಶನ ಮತ್ತು ಉಸ್ತುವಾರಿ ಸಚಿವ ರಮಾನಾಥ ರೈಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸಕ್ಕೆ ರಾಜಶೇಖರ್ ಕೋಟ್ಯಾನ್ ಕೂಡ ಕೈ ಜೋಡಿಸಬೇಕು ಎಂದರು.
ಉದ್ಯಮಿ ಹರೀಶ್ ಬಿ. ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎನ್.ಟಿ. ಪೂಜಾರಿ, ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್, ಮೇಯರ್ ಕವಿತಾ ಸನಿಲ್, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ನವೀನ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪದ್ಮನಾಭ ಕೋಟ್ಯಾನ್, ಉದ್ಯಮಿ ಸುರೇಂದ್ರ ಪೂಜಾರಿ ಭಾಗವಹಿಸಿದ್ದರು.
ದೀಪಕ್ ಪೂಜಾರಿ ಸ್ವಾಗತಿಸಿದರು. ನಿವೃತ್ತ ಎಸ್ಪಿ ಹಾಗೂ ಪಡುಮಲೆಯ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನ ಕಾರ್ಯಾಧ್ಯಕ್ಷ ಪಿತಾಂಬರ ಹೆರಾಜೆ ಅಭಿನಂದನಾ ಭಾಷಣ ಮಾಡಿದರು. ಚಂದ್ರಶೇಖರ ಸುವರ್ಣ ಅಭಿನಂದನಾ ಪತ್ರ ವಾಚಿಸಿದರು. ರವಿ ಪೂಜಾರಿ ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು, ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.







